ADVERTISEMENT

ರೈತ ಸಂಘದ ಜಿಲ್ಲಾಧ್ಯಕ್ಷೆ ಜತೆ ಅನುಚಿತ ವರ್ತನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 19:30 IST
Last Updated 7 ಏಪ್ರಿಲ್ 2018, 19:30 IST

ಬೆಂಗಳೂರು: ರೈತ ಸಂಘದ ಜಿಲ್ಲಾ ಘಟಕವೊಂದರ ಅಧ್ಯಕ್ಷೆ ಜತೆ ಖಾಸಗಿ ಬಸ್ಸಿನ ನಿರ್ವಾಹಕ ಅನುಚಿತವಾಗಿ ವರ್ತಿಸಿದ್ದು, ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕರ್ನಾಟಕದ ಜಿಲ್ಲೆಯೊಂದರ ನಿವಾಸಿಯಾದ ಸಂತ್ರಸ್ತೆ, ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಏಪ್ರಿಲ್‌ 3ರಂದು ಆಯೋಜಿಸಿದ್ದ ಸ್ವರಾಜ್‌ ಇಂಡಿಯಾ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಅದನ್ನು ಮುಗಿಸಿಕೊಂಡು ಊರಿಗೆ ಮರಳುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.

‘ತಮ್ಮೂರಿಗೆ ಹೋಗುವ ಬಸ್ಸಿಗಾಗಿ ಸಂತ್ರಸ್ತೆಯು ಎಂಟನೇ ಮೈಲಿ ಸಮೀಪ ಕಾಯುತ್ತಿದ್ದರು. ಅಲ್ಲಿಗೆ ಬಂದಿದ್ದ ಎಸ್‌.ಆರ್‌.ಬಿ ಕಂಪನಿಯ ಬಸ್‌ ಹತ್ತುವ ಮುನ್ನ ಟಿಕೆಟ್‌ ದರದ ಬಗ್ಗೆ ವಿಚಾರಿಸಿದ್ದಾರೆ. ‘ಪ್ರಯಾಣ ದರ ₹450’ ಎಂದು ನಿರ್ವಾಹಕ ತಿಳಿಸಿದ್ದಾನೆ. ‘ನಿತ್ಯವೂ ₹250 ಕೊಡುತ್ತೇನೆ. ಇವತ್ತು ಏಕೆ ದುಬಾರಿ’ ಎಂದು ಅವರು ಮರು ಪ್ರಶ್ನಿಸಿದ್ದರು.

ADVERTISEMENT

‘ಆಗ ನಿರ್ವಾಹಕ ಸಂತ್ರಸ್ತೆಯ ಜತೆ ವಾಗ್ವಾದಕ್ಕೆ ಇಳಿದು, ತಳ್ಳಾಡಿ ಅನುಚಿತವಾಗಿ ವರ್ತಿಸಿದ್ದಾನೆ. ಕೆಲ ಹೊತ್ತಿನ ಬಳಿಕ ಅಲ್ಲಿಂದ ಹೊರಟ ಬಸ್ ಅನ್ನು ಆಟೊದಲ್ಲಿ ಹಿಂಬಾಲಿಸಿದ ಸಂತ್ರಸ್ತೆ, ನೆಲಮಂಗಲ ಟೋಲ್‌ಗೇಟ್‌ ಬಳಿ ತಡೆದು ನಿರ್ವಾಹಕನ ವರ್ತನೆ ಖಂಡಿಸಿದ್ದರು. ಅಲ್ಲಿಯೂ ಆತ ಅನುಚಿತವಾಗಿ ವರ್ತಿಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಡಿ ನಿರ್ವಾಹಕನ ಜತೆಗೆ ಮಾಲೀಕನ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.