ADVERTISEMENT

ರೈಲು ಮಾರ್ಗದ ದಿಬ್ಬಕ್ಕೆ ಬಸ್ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:35 IST
Last Updated 16 ಅಕ್ಟೋಬರ್ 2011, 19:35 IST

ಯಲಹಂಕ: ಇಲ್ಲಿನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಅಳ್ಳಾಳಸಂದ್ರ ರೈಲ್ವೆಗೇಟ್ ಬಳಿ ಬಿಎಂಟಿಸಿ (ಪುಷ್ಪಕ್) ಬಸ್‌ನ ಬ್ರೇಕ್ ವಿಫಲಗೊಂಡು ರೈಲ್ವೆ ಹಳಿಯ ದಿಬ್ಬಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಅನಾಹುತ ಸಂಭವಿಸಿಲ್ಲ.

ಭಾನುವಾರ ಬೆಳಿಗ್ಗೆ ಸುಮಾರು 10 ಗಂಟೆ ವೇಳೆಯಲ್ಲಿ ದೊಡ್ಡಬಳ್ಳಾಪುರದಿಂದ ಬೆಂಗಳೂರಿನ ಕಾವೇರಿ ಭವನದ ಕಡೆಗೆ ಹೊರಟಿದ್ದ ಪುಷ್ಪಕ್ ಬಸ್‌ನ ಬ್ರೇಕ್ ವಿಫಲಗೊಂಡ ಪರಿಣಾಮ ಅದು ಅಳ್ಳಾಳಸಂದ್ರ ಗೇಟ್ ಬಳಿ ಮೊದಲು ರಸ್ತೆ ದಿಬ್ಬವನ್ನು ಹಾದು ಹೋಗಿ ನಂತರ ರೈಲ್ವೆ ಹಳಿಯ ದಿಬ್ಬಕ್ಕೆ ಡಿಕ್ಕಿ ಹೊಡೆದು ನಿಂತಿತು.

ತಕ್ಷಣ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು, ಬಸ್‌ನ ಹಿಂಭಾಗದ ಗಾಜಿನ ಕಿಟಕಿಯನ್ನು ತೆರೆದು ಪ್ರಯಾಣಿಕರನ್ನು ಕೆಳಗೆ ಇಳಿಸಿದರು. ಗಾಬರಿಗೊಂಡ್ದ್ದಿದ ಪ್ರಯಾಣಿಕರು ಹೊರಗೆ ಬಂದು ನಿಟ್ಟುಸಿರು ಬಿಟ್ಟರು.
ಈ ಅವಘಡದಿಂದ ಈ ಭಾಗದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳು ಸುಮಾರು 1 ಕಿಲೋ ಮೀಟರ್ ದೂರದವರೆಗೆ ಸಾಲುಗಟ್ಟಿ ನಿಂತಿದ್ದವು.

ಪರಿಸ್ಥಿತಿ ನಿಯಂತ್ರಿಸಲು ಸಂಚಾರಿ ಪೊಲೀಸರು ಹರಸಾಹಸ ಪಡಬೇಕಾಯಿತು. ಅಲ್ಲದೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಾಗಿದ್ದ ಪ್ರಯಾಣಿಕರು ಕೂಡ ಸಂಚಾರದ ಒತ್ತಡದಲ್ಲಿ ಸಿಲುಕಿ ಪರದಾಡಬೇಕಾಯಿತು. 

ಸಂಚಾರಿ ಪೊಲೀಸರು ನಂತರ ಬಸ್ಸನ್ನು ರೈಲ್ವೆ ಹಳಿ ದಿಬ್ಬದಿಂದ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಂಚಾರಿ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್ ಹಾಗೂ ಯಲಹಂಕ ಠಾಣೆಯ ಇನ್ಸ್‌ಪೆಕ್ಟರ್ ಕೆಂಚೇಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.