ADVERTISEMENT

ರೈಲು ಶೌಚಾಲಯದಲ್ಲಿ ಸಿಕ್ಕಿಬಿದ್ದ ಅತ್ಯಾಚಾರದ ಆರೋಪಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 19:45 IST
Last Updated 24 ಫೆಬ್ರುವರಿ 2018, 19:45 IST
ರೈಲು ಶೌಚಾಲಯದಲ್ಲಿ ಸಿಕ್ಕಿಬಿದ್ದ ಅತ್ಯಾಚಾರದ ಆರೋಪಿ
ರೈಲು ಶೌಚಾಲಯದಲ್ಲಿ ಸಿಕ್ಕಿಬಿದ್ದ ಅತ್ಯಾಚಾರದ ಆರೋಪಿ   

ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ನೇಪಾಳದ ಸುರೇಶ್‌ (40) ಎಂಬಾತ ಓಡಿಶಾದ ಭುವನೇಶ್ವರ ನಿಲ್ದಾಣದಲ್ಲಿ ‘ವಿವೇಕ್ ಎಕ್ಸ್‌ಪ್ರೆಸ್‌’ ರೈಲಿನ ಶೌಚಾಲಯದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.

ಬಾಣಸವಾಡಿಯ ಎಚ್‌.ಆರ್‌.ಬಿ.ಆರ್‌ ಬಡಾವಣೆಯ ವಸತಿಗೃಹವೊಂದರಲ್ಲಿ ಕೆಲಸಕ್ಕಿದ್ದ ಆರೋಪಿ, ಬಾಬುಸಾಪಾಳ್ಯದಲ್ಲಿ ವಾಸವಿದ್ದ 22 ವರ್ಷದ ನೇಪಾಳದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ತಾನು ಕೆಲಸ ಮಾಡುತ್ತಿದ್ದ ವಸತಿಗೃಹಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದರು.

ಕೃತ್ಯಕ್ಕೆ ಯುವತಿಯು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಮದುವೆ ಆಗುವುದಾಗಿ ಭರವಸೆ ನೀಡಿದ್ದ. ಆದರೆ, ಆರೋಪಿಗೆ ಈಗಾಗಲೇ ಮದುವೆಯಾಗಿತ್ತು. ಅದನ್ನು ಯುವತಿಗೆ ತಿಳಿಸಿರಲಿಲ್ಲ. ಆ ವಿಷಯ ಗೊತ್ತಾಗುತ್ತಿದ್ದಂತೆ ಯುವತಿಯು ಪೋಷಕರ ಎದುರು ಅಳಲು ತೋಡಿಕೊಂಡಿದ್ದರು. ಅತ್ಯಾಚಾರ ಹಾಗೂ ವಂಚನೆ ಬಗ್ಗೆ ಯುವತಿಯ ಸಹೋದರ ದೂರು ನೀಡಿದ್ದರು. ಅದಾದ ಬಳಿಕ ಆರೋಪಿ ಪರಾರಿಯಾಗಿದ್ದ.

ADVERTISEMENT

ಆರೋಪಿಯ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ನೇಪಾಳದವರು ವಾಸವಿರುವ ಪ್ರದೇಶಗಳಲ್ಲಿಯ 50 ಮಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಲಾಯಿತು. ನೇಪಾಳಕ್ಕೆ ಪರಾರಿಯಾಗಲು ಆರೋಪಿಯು ತಮಿಳುನಾಡಿನ ಸೇಲಂಗೆ ಹೋಗಿರುವುದಾಗಿ ಗೊತ್ತಾಯಿತು. ವಿಶೇಷ ತಂಡವು ಸೇಲಂಗೆ ಹೋದಾಗ, ವಿವೇಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆರೋಪಿಯು ಗುವಾಹಟಿಗೆ ಪ್ರಯಾಣಿಸುತ್ತಿದ್ದ ವಿಷಯ ತಿಳಿಯಿತು.

ಮತ್ತೊಂದು ವಿಶೇಷ ತಂಡವು ವಿಮಾನದಲ್ಲಿ ಒಡಿಶಾದ ಭುವನೇಶ್ವರಕ್ಕೆ ಹೋಗಿ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿತ್ತು. ವಿವೇಕ್‌ ಎಕ್ಸ್‌ಪ್ರೆಸ್‌ ರೈಲು ಆ ನಿಲ್ದಾಣಕ್ಕೆ ಬರುತ್ತಿದ್ದಂತೆ ತಪಾಸಣೆ ನಡೆಸಿತು. ಆರೋಪಿಯು ಸಾಮಾನ್ಯ ಬೋಗಿಯ ಶೌಚಾಲಯದಲ್ಲಿ ಅಡಗಿ ಕುಳಿತಿದ್ದು ಕಂಡಿತು. ನಂತರ ಆತನನ್ನು ಬಂಧಿಸಿ ನಗರಕ್ಕೆ ಕರೆತರಲಾಯಿತು ಎಂದು ಪೊಲೀಸರು ವಿವರಿಸಿದರು.

ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌, ‘ಪ್ರಕರಣ ದಾಖಲಾದ ಎರಡೇ ದಿನದಲ್ಲೇ ಆರೋಪಿಯನ್ನು ಸೆರೆ ಹಿಡಿದಿದ್ದೇವೆ. ಆರೋಪಿಯು ನೇಪಾಳಕ್ಕೆ ಹೋಗಿದ್ದರೆ, ಬಂಧಿಸುವುದು ಕಷ್ಟವಾಗುತ್ತಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.