ADVERTISEMENT

ರೈಲ್ವೆ ಇನ್‌ಸ್ಪೆಕ್ಟರ್‌ ಪುತ್ರ ಸೇರಿ ಐವರ ಸೆರೆ

ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:30 IST
Last Updated 3 ಜನವರಿ 2014, 19:30 IST

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಗುಜರಾತ್‌ನ ರೈಲ್ವೆ ಭದ್ರತಾ ಪಡೆಯ (ಆರ್‌ಪಿಎಫ್‌) ಇನ್‌ಸ್ಪೆಕ್ಟರ್‌ವೊಬ್ಬರ ಪುತ್ರ ಹಾಗೂ ವೈದ್ಯರ ಮಗ ಸೇರಿ ಐದು ಮಂದಿ ಆರೋಪಿಗಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಮಗ ಮುಖೇಶ್ (23), ನೆಲಮಂಗಲದ ಸರ್ಕಾರಿ ಆಸ್ಪತ್ರೆಯ ವೈದ್ಯರ ಪುತ್ರ ವರುಣ್‌ (23), ಕಮ್ಮಗೊಂಡನಹಳ್ಳಿಯ ಪ್ರಭು (23), ಯಶವಂತಪುರದ ಐಎಎಸ್‌ಇ ವಸತಿ ಸಮುಚ್ಛಯದ ನಿವಾಸಿಯ ಸತೀಶ್ (24) ಹಾಗೂ ಆರ್‌.ಟಿ.ನಗರದ ಮಹಮ್ಮದ್‌ ಉಮೇಜ್‌ (23) ಎಂಬುವರನ್ನು ಬಂಧಿಸಿ 4.7 ಕೆ.ಜಿ ಗಾಂಜಾ ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ. ಕಿರಣ್‌ ಮತ್ತು ಶಾಕಿರ್‌ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ನಗರದ ಆಚಾರ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಓದುತ್ತಿರುವ ವರುಣ್‌, ಯಶವಂತಪುರ ಸಮೀಪದ ಪ್ಲಾಟಿನಂ ಸಿಟಿ ‘ಬಿ’ ಬ್ಲಾಕ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪುಣೆಯಲ್ಲಿದ್ದ ಸ್ನೇಹಿತ ಮುಖೇಶ್‌ನಿಂದ ಗಾಂಜಾ ತರಸಿಕೊಂಡು, ಸಣ್ಣ ಸಣ್ಣ ಪೊಟ್ಟಣ ಮಾಡಿ ಉಳಿದ ಆರೋಪಿಗಳ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಯಾಗುತ್ತಿರುವ ಬಗ್ಗೆ ಭಾತ್ಮೀದಾರರಿಂದ ಖಚಿತ ಮಾಹಿತಿ ಬಂತು. ಆ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಸಿಬ್ಬಂದಿ, ಗಾಂಜಾ ಬಳಕೆ ಮಾಡುತ್ತಿದ್ದ ವಿದ್ಯಾರ್ಥಿವ ಗಳನ್ನು ವಿಚಾರಣೆಗೆ ಒಳಪಡಿಸಿದಾಗ ವರುಣ್‌ ಸಿಕ್ಕಿ ಬಿದ್ದ. ಆತನಿಂದ ಉಳಿದ ಆರೋಪಿಗಳನ್ನು ಬಂಧಿಸ ಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್, ಎಸಿಪಿ ಕೆ.ಶೇಷಾದ್ರಿ, ಇನ್‌ಸ್ಪೆಕ್ಟರ್‌ ಕೆ.ಎಲ್‌.ಕೃಷ್ಣ, ಎಸ್‌ಐ ವೆಂಕಟೇಶ್‌ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.