ADVERTISEMENT

ರೋಷನ್ ಬೇಗ್‌ಗೆ ಹೈಕೋರ್ಟ್ ದಂಡ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 19:30 IST
Last Updated 12 ಏಪ್ರಿಲ್ 2011, 19:30 IST

ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಲ್ಕೂವರೆ ವರ್ಷ ಕಳೆದರೂ ಆಕ್ಷೇಪಣಾ ಹೇಳಿಕೆ ಸಲ್ಲಿಸದ ಶಾಸಕ ರೋಷನ್ ಬೇಗ್ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.‘ಡ್ಯಾನಿಷ್ ಪಬ್ಲಿಕೇಷನ್ ಕಂಪೆನಿ’ಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಬೇಗ್ ಅವರ ವಿರುದ್ಧ 2006ರಲ್ಲಿ ಸಮಾಜ ಸೇವಕ ಅಬ್ದುಲ್ ಹಕ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ. ಉರ್ದು ಸಮುದಾಯಕ್ಕೆ ಜಮೀನು ನೀಡುವ ಬದಲು ಅದನ್ನು ಕಂಪೆನಿಗೆ ನೀಡಿರುವ ಕ್ರಮವನ್ನು ಹಕ್ ಪ್ರಶ್ನಿಸಿದ್ದಾರೆ.
 

ತಮ್ಮ ಸಮುದಾಯಕ್ಕೆ 4000 ಚದರ ಅಡಿ ಜಾಗ ನೀಡುವಂತೆ 2005ರಲ್ಲಿ ಹಕ್ ಬೆಂಗಳೂರು ಮಹಾನಗರ ಪಾಲಿಕೆಗೆ ಮನವಿ ಮಾಡಿಕೊಂಡಿದ್ದರು. ಆದರೆ ಖಾಸಗಿ ಸಂಸ್ಥೆಗೆ ಜಾಗ ನೀಡಲು ಆಗದು ಎಂದು ಪಾಲಿಕೆ ಅವರಿಗೆ ತಿಳಿಸಿತ್ತು. ಆದರೆ ಅದೇ ಜಮೀನನ್ನು ಡ್ಯಾನಿಷ್ ಕಂಪೆನಿಗೆ ಶೇ 50ರ ರಿಯಾಯಿತಿ ದರದಲ್ಲಿ ನೀಡಿದೆ ಎನ್ನುವುದು ಅರ್ಜಿದಾರರ ಆರೋಪ.
ಈ ಅರ್ಜಿಯು ಅನೇಕ ಬಾರಿ ವಿಚಾರಣೆಗೆ ಬಂದರೂ, ಕೋರ್ಟ್‌ನಿಂದ ಹಲವಾರು ಬಾರಿ ಆದೇಶ ಹೊರಟರೂ ಬೇಗ್ ಅವರು ಆಕ್ಷೇಪಣೆ ಸಲ್ಲಿಸದ ಕಾರಣ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ದಂಡ ವಿಧಿಸಿದೆ.
 

ನಿತ್ಯಾನಂದ ಭಕ್ತರ ವಿಚಾರಣೆಗೆ ತಡೆ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯ ನಾಲ್ವರು ಭಕ್ತರ ವಿರುದ್ಧ ಡಿವೈಎಸ್ಪಿ (ಸಿಐಡಿ) ರಾಮಲಿಂಗಪ್ಪ ಅವರು ದಾಖಲು ಮಾಡಿರುವ ಮೊಕದ್ದಮೆಗೆ ಸಂಬಂಧಿಸಿದ ವಿಚಾರಣೆಗೆ ಹೈಕೋರ್ಟ್ ಮಂಗಳವಾರ ತಡೆ ನೀಡಿ ಆದೇಶಿಸಿದೆ.ಭಕ್ತರಾದ ನಿತ್ಯ ಸಚ್ಚಿದಾನಂದ, ನಿತ್ಯ ಪ್ರಭಾನಂದ, ದಯಾನಂದ ಹಾಗೂ ಸಂತೋಷ್ ಎನ್ನುವವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ಈ ಆದೇಶ ಹೊರಡಿಸಿದ್ದಾರೆ.
 

ADVERTISEMENT

ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆಂದು ರಾಮಲಿಂಗಪ್ಪ ಅವರು ಬಿಡದಿ ಆಶ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಭಕ್ತರು ಅವರನ್ನು ಒಳಗೆ ಬಿಡದೇ ಅಡ್ಡಿ ಪಡಿಸಿದ್ದರು ಎಂಬ ಆರೋಪದ ಮೇಲೆ ಇವರೆಲ್ಲರ ವಿರುದ್ಧ ರಾಮಲಿಂಗಪ್ಪ ಮೊಕದ್ದಮೆ ದಾಖಲು ಮಾಡಿದ್ದರು. ಇದರ ರದ್ದತಿಗೆ ಭಕ್ತರು ಹೈಕೋರ್ಟ್ ಅನ್ನು ಕೋರಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.