ADVERTISEMENT

ರೋಹಿಣಿ ವಿರುದ್ಧ ಮಂಜು ದೂರು ಆಧಾರ ರಹಿತ: ಸಂಜೀವ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:30 IST
Last Updated 13 ಏಪ್ರಿಲ್ 2018, 19:30 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಬೆಂಗಳೂರು: ಹಾಸನ ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪಶುಸಂಗೋಪನಾ ಸಚಿವ ಎ.ಮಂಜು ನೀಡಿರುವ ದೂರು ಆಧಾರ ರಹಿತ ಎಂದು ಚುನಾವಣಾ ಆಯೋಗ ತಳ್ಳಿಹಾಕಿದೆ.

‘ರೋಹಿಣಿ ಸಿಂಧೂರಿ ನನ್ನ ಘನತೆ ಮತ್ತು ವ್ಯಕ್ತಿತ್ವಕ್ಕೆ ಕುಂದುಂಟು ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ. ಆದ್ದರಿಂದ ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಸಚಿವ ಮಂಜು ಇದೇ 7 ರಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರಿಗೆ ದೂರು ನೀಡಿದ್ದರು.

ಸಚಿವ ಮಂಜು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಕೆಲಸಗಳನ್ನು ಮಾಡುತ್ತಿದ್ದರು. ಅಲ್ಲದೆ, ಒಂದು ಸಾವಿರ ಕುಟುಂಬಗಳಿಗೆ ಸರ್ಕಾರದ ಭೂಮಿ ಹಂಚುವ ಕಾರ್ಯದಲ್ಲಿ ತೊಡಗಿದ್ದರ ಆರೋಪದ ಮೇಲೆ ಸಚಿವರ ವಿರುದ್ಧ ರೋಹಿಣಿ ಪ್ರಕರಣ ದಾಖಲಿಸಿದ್ದರು.

ADVERTISEMENT

ಮಂಜು ನೀಡಿದ ದೂರಿನ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮೈಸೂರು ವಿಭಾಗೀಯ ಆಯುಕ್ತರಿಗೆ ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದರು. ಆದರೆ, ಸಚಿವರು ಮಾಡಿರುವ ಆರೋಪಗಳು ಆಧಾರ ರಹಿತ ಎಂದು ಅವರು ವರದಿ ನೀಡಿದ್ದಾರೆ ಎಂದು ಸಂಜೀವ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.