ಬೆಂಗಳೂರು: ಭೂ ವ್ಯಾಜ್ಯಕ್ಕೆ ಸಹಕರಿಸಲು ರೂ 5 ಸಾವಿರ ಲಂಚ ಪಡೆಯುತ್ತಿದ್ದ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಲ್.ಕೃಷ್ಣಪ್ಪ ಅವರನ್ನು ಶನಿವಾರ ಲೋಕಾಯುಕ್ತ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಠಾಣೆಯ ವ್ಯಾಪ್ತಿಯಲ್ಲಿರುವ ಮಂಜುನಾಥ್ ಎಂಬುವರ ವಿರುದ್ಧ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ದೂರು ನೀಡಿದ್ದರು. ಈ ದೂರನ್ನು ದಾಖಲಿಸಿಕೊಳ್ಳದಿರಲು 15,000 ರೂಪಾಯಿ ಲಂಚ ನೀಡುವಂತೆ ಒತ್ತಾಯಿಸಿದ್ದ ಕೃಷ್ಣಪ್ಪ, ಎರಡು ಕಂತಿನಲ್ಲಿ ಮುಂಗಡವಾಗಿ ಹತ್ತು ಸಾವಿರ ರೂಪಾಯಿ ಪಡೆದುಕೊಂಡಿದ್ದರು. ಮತ್ತೆ ಐದು ಸಾವಿರ ರೂಪಾಯಿ ನೀಡುವಂತೆ ಶುಕ್ರವಾರ ಒತ್ತಾಯಿಸಿದ್ದರು.
ಶನಿವಾರ ಹಣ ತರುವಂತೆ ಎಸ್‌ಐ ಸೂಚಿಸಿದ್ದರು. ಸಂಜೆ ಹಣದೊಂದಿಗೆ ಮಂಜುನಾಥ್ ಹೋಗಿದ್ದರು. ಠಾಣೆಯಿಂದ ಕೆಲ ದೂರದಲ್ಲಿ ಮೋಟಾರ್ ಬೈಕ್‌ನಲ್ಲಿ ಬಂದ ಕೃಷ್ಣಪ್ಪ ಹಣ ಪಡೆದು ಹಾಗೆಯೇ ಹೋದರು. ಸ್ವಲ್ಪ ದೂರ ಸಾಗುತ್ತಿದ್ದಂತೆ ರಸ್ತೆಯಲ್ಲೇ ಮೋಟಾರ್ ಬೈಕ್ ತಡೆದು ತಪಾಸಣೆ ನಡೆಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್ ಅಂಜನ್‌ಕುಮಾರ್, ಆರೋಪಿಯನ್ನು ಬಂಧಿಸಿದರು.
ಪ್ರಾಥಮಿಕ ತನಿಖೆಯ ಬಳಿಕ ಆರೋಪಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ ಬಳಿಕ ಕೃಷ್ಣಪ್ಪ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.
ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಗಿರೀಶ್ ನೇತೃತ್ವದಲ್ಲಿ ಡಿವೈಎಸ್‌ಪಿ ಅಬ್ದುಲ್ ಅಹದ್, ಇನ್‌ಸ್ಪೆಕ್ಟರ್‌ಗಳಾದ ಅಂಜನ್‌ಕುಮಾರ್, ನಿರಂಜನ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.