ADVERTISEMENT

ಲಂಚ: ಪಿಎಸ್‌ಐ, ಪೊಲೀಸ್ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಲಂಚಕ್ಕಾಗಿ ಪೀಡಿಸಿ ವ್ಯಕ್ತಿಯೊಬ್ಬರನ್ನು ಗೃಹ ಬಂಧನದಲ್ಲಿರಿಸಿದ್ದ ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ಮೋಹನ್‌ಕುಮಾರ್ ಮತ್ತು ಕಾನ್‌ಸ್ಟೆಬಲ್ ದೊಡ್ಡಸಿದ್ದಯ್ಯ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

 ವಂಚನೆ ಆರೋಪ ಎದುರಿಸುತ್ತಿರುವ ಆರೋಪಿಯಿಂದ ನಾಲ್ಕು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಸ್‌ಐ ಮತ್ತು ಕಾನ್‌ಸ್ಟೆಬಲ್ ಮೂರು ಲಕ್ಷ ರೂಪಾಯಿ ಪಡೆಯುವಾಗ ಸೆರೆ ಸಿಕ್ಕಿದ್ದಾರೆ. ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದು, ಗುರುವಾರ ಬೆಳಿಗ್ಗೆ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಜಾಮೀನಿಗೆ ಸವಾಲ್: ಎಚ್‌ಎಸ್‌ಆರ್ ಬಡಾವಣೆ ನಿವಾಸಿ ಶ್ರೀಧರ್ ಎಂಬುವವರ ವಿರುದ್ಧ ಮಂಜುಳಾ ಎಂಬ ಮಹಿಳೆ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು. ತಮ್ಮ ತಾಯಿ ಪ್ರಮೀಳಾ ಹೆಸರಿನಲ್ಲಿದ್ದ ಮನೆಯನ್ನು ಸುಳ್ಳು ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಸೃಷ್ಟಿಸಿಕೊಂಡು ಶ್ರೀಧರ್ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಆರೋಪಿ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದರು. ಜಾಮೀನು ಮಂಜೂರಾತಿ ಆದೇಶ ಹಿಡಿದು ಠಾಣೆಗೆ ತೆರಳಿದ್ದ ಶ್ರೀಧರ್ ಅವರಿಗೆ ರೂ 4 ಲಕ್ಷ ಲಂಚ ನೀಡದೇ ಇದ್ದರೆ ಬಂಧಿಸುವುದಾಗಿ ಬೆದರಿಕೆ ಒಡ್ಡಿದ್ದರು. ತಕ್ಷಣವೇ ಅವರು ಲೋಕಾಯುಕ್ತ ಪೊಲೀಸರನ್ನು ಭೇಟಿಯಾಗಿ ವಿಷಯ ತಿಳಿಸಿದ್ದರು. `ಲಂಚಕ್ಕೆ ಬೇಡಿಕೆ~ ಇಡುವುದನ್ನು ರೆಕಾರ್ಡ್ ಮಾಡಲು ರೆಕಾರ್ಡರ್ ಪಡೆದು ಹೋಗಿದ್ದರು. ಆದರೆ, ಭಾನುವಾರದಿಂದಲೇ ಶ್ರೀಧರ್ ನಿವಾಸಕ್ಕೆ ಕಾನ್‌ಸ್ಟೆಬಲ್ ದೊಡ್ಡಸಿದ್ದಯ್ಯ ಅವರನ್ನು ಕಳುಹಿಸಿದ್ದ ಎಸ್‌ಐ ಹಣ ನೀಡುವವರೆಗೂ ಹೊರಹೋಗಲು ಬಿಡದಂತೆ ಗೃಹ ಬಂಧನ ವಿಧಿಸಿದ್ದರು. ನಂತರ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದ್ದ ಶ್ರೀಧರ್‌ರ ಗೆಳೆಯ ಪ್ರಭಾಕರ್ ಮುಂದಿನ ಕಾರ್ಯಾಚರಣೆಗೆ ಮನವಿ ಮಾಡಿದ್ದರು. ಪ್ರಕರಣದ ತನಿಖೆಯನ್ನು ಇನ್‌ಸ್ಪೆಕ್ಟರ್ ಅಂಜನ್‌ಕುಮಾರ್ ಅವರಿಗೆ ವಹಿಸಿದ್ದ ಬೆಂಗಳೂರುನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್, ಡಿವೈಎಸ್‌ಪಿ ಅಹದ್ ಮತ್ತು ಇನ್‌ಸ್ಪೆಕ್ಟರ್ ಅನಿಲ್‌ಕುಮಾರ್ ಅವರನ್ನು ಒಳಗೊಂಡ ತಂಡ ರಚಿಸಿದ್ದರು. ಮೂರು ಲಕ್ಷ ರೂಪಾಯಿಯೊಂದಿಗೆ ಪ್ರಭಾಕರ್ ಅವರನ್ನು ಕಳುಹಿಸಿದ್ದ ಈ ತಂಡ ಆರೋಪಿಗಳ ಬಂಧನಕ್ಕೆ ಕಾರ್ಯತಂತ್ರ ರೂಪಿಸಿತ್ತು.

 ಕೆಂಟಕಿಯಲ್ಲಿ ಬಲೆಗೆ: ಪ್ರಭಾಕರ್ ಹಣ ತಂದಿರುವುದಾಗಿ ದೊಡ್ಡಸಿದ್ದಯ್ಯ ಅವರನ್ನು ಸಂಪರ್ಕಿಸಿದರು. ಕೋರಮಂಗಲದ ಫೋರಂ ಮಾಲ್ ಬಳಿಯ ಕೆಂಟಕಿ ಫ್ರೈಡ್ ಚಿಕನ್ (ಕೆಎಫ್‌ಸಿ) ಮಳಿಗೆಗೆ ಬರುವಂತೆ ಕಾನ್‌ಸ್ಟೆಬಲ್ ಸೂಚಿಸಿದ್ದರು. ಮಧ್ಯಾಹ್ನ ಶ್ರೀಧರ್ ಅವರೊಂದಿಗೆ ದೊಡ್ಡಸಿದ್ದಯ್ಯ ಅಲ್ಲಿಗೆ ಹಣ ಪಡೆಯಲು ಬಂದರು. ಅದಕ್ಕೂ ಮುನ್ನವೇ ಅಲ್ಲಿಗೆ ತೆರಳಿದ್ದ ತನಿಖಾ ತಂಡದ ಸದಸ್ಯರು ಗ್ರಾಹಕರ ಸೋಗಿನಲ್ಲಿ ಕುಳಿತಿದ್ದರು.

ಪ್ರಭಾಕರ್ ಅವರಿಂದ ಹಣ ಪಡೆದು ಎಣಿಸುವ ವೇಳೆ ಕಾನ್‌ಸ್ಟೆಬಲ್‌ನನ್ನು ವಶಕ್ಕೆ ಪಡೆದರು. ಬಳಿಕ ಆತನ ಮೂಲಕವೇ ಮೋಹನ್‌ಕುಮಾರ್ ಅವರನ್ನು ಸಂಪರ್ಕಿಸಿ ಪ್ರಭಾಕರ್ ಮೂರು ಲಕ್ಷ ರೂಪಾಯಿ ನೀಡಿದ್ದಾರೆ ಎಂಬ ಸಂದೇಶ ರವಾನಿಸಿದರು. ಇದರಿಂದ ಕುಪಿತರಾದ ಎಸ್‌ಐ ಶ್ರೀಧರ್ ಮತ್ತು ಪ್ರಭಾಕರ್ ಅವರನ್ನು ಠಾಣೆಗೆ ಕಳುಹಿಸುವಂತೆ ಸೂಚಿಸಿದರು. ಅಂಗಿ ಗುಂಡಿಯಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ಇಬ್ಬರನ್ನೂ ಠಾಣೆಗೆ ಕಳುಹಿಸಲಾಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಭಾಕರ್ ಮತ್ತು ಶ್ರೀಧರ್ ಅವರನ್ನು ಬೆದರಿಸುತ್ತಲೇ ಇದ್ದ ಎಸ್‌ಐ, ನಾಲ್ಕು ಲಕ್ಷ ರೂಪಾಯಿ ನೀಡದೇ ಇದ್ದರೆ ಬಿಡುವುದಿಲ್ಲವೆಂದು ಕೂಗಾಡುತ್ತಿ ದ್ದರು. ಆಗ ಠಾಣೆ ಸಮೀಪವೇ ಇದ್ದ ತನಿಖಾ ತಂಡ ದಾಳಿ ನಡೆಸಿ ಮೋಹನ್‌ಕುಮಾರ್‌ರನ್ನೂ ಬಂಧಿಸಿತು.
`ಆರೋಪಿಗಳನ್ನು ಬಂಧಿಸಿದ ಬಳಿಕ ಲೋಕಾಯುಕ್ತ ಕಚೇರಿಗೆ ಕರೆತರಲಾಗಿದೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಗುರುವಾರ ಬೆಳಿಗ್ಗೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು~ ಎಂದು ಲೋಕಾಯುಕ್ತದ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.