ADVERTISEMENT

ಲಂಚ ವಸೂಲಿ ಆರೋಪ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:51 IST
Last Updated 7 ಸೆಪ್ಟೆಂಬರ್ 2013, 19:51 IST

ಬೆಂಗಳೂರು: ಹಣ್ಣು ಸಾಗಿಸುವವರಿಂದ ಗಣೇಶ ಚತುರ್ಥಿ ನೆಪದಲ್ಲಿ ಲಂಚ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ (ಎಪಿಎಂಸಿ) ಮೇಲೆ ಶನಿವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, 24,275 ರೂಪಾಯಿ ನಗದನ್ನು ವಶಪಡಿಸಿಕೊಂಡು ಮೂವರು ಮಾರುಕಟ್ಟೆ ಮೇಲ್ವಿಚಾರಕರನ್ನು ಬಂಧಿಸಿದ್ದಾರೆ.

ಪ್ರಕರಣದ ಸಂಬಂಧ ಆನೇಕಲ್ ಎಪಿಎಂಸಿಯ ಮಾರುಕಟ್ಟೆ ಮೇಲ್ವಿಚಾರಕರಾದ ಸೋಮಶೇಖರ್, ಪಾಪಿರೆಡ್ಡಿ ಹಾಗೂ ಶ್ರೀಧರಮೂರ್ತಿ ಅವರನ್ನು ಬಂಧಿಸಲಾಗಿದೆ. ಪ್ರಾಥಮಿಕ ವಿಚಾರಣೆಯ ಬಳಿಕ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್. ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ಆನೇಕಲ್ ಎಪಿಎಂಸಿಯಲ್ಲಿ ಹಣ್ಣಿನ ಮಾರುಕಟ್ಟೆಯೂ ಇದೆ. ಇಲ್ಲಿಗೆ ಹಣ್ಣುಗಳನ್ನು ತರುವ ಮತ್ತು ಹೊರಕ್ಕೆ ಸಾಗಿಸುವ ಲಾರಿಗಳಿಂದ ದೊಡ್ಡ ಮೊತ್ತದ ಲಂಚ ವಸೂಲಿ ಮಾಡಲಾಗುತ್ತಿದೆ. ಗಣೇಶ ಚತುರ್ಥಿಯ ಕಾರಣ ನೀಡಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಲಭ್ಯವಾಗಿತ್ತು.

ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಇಡಾ ಮಾರ್ಟಿನ್ ಮಾರ್ಬನಿಯಂಗ್ ಮತ್ತು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್‌ಪಿ ಡಾ.ಎಂ.ಅಶ್ವಿನಿ ಅವರ ನೇತೃತ್ವದಲ್ಲಿ ಐವರು ಡಿವೈಎಸ್‌ಪಿಗಳು ಮತ್ತು 14 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 80ಕ್ಕೂ ಹೆಚ್ಚು ಸದಸ್ಯರಿದ್ದ ತನಿಖಾ ತಂಡ ಶನಿವಾರ ಬೆಳಿಗ್ಗೆ ಎಪಿಎಂಸಿ ಮೇಲೆ ದಾಳಿ ಮಾಡಿ, ಶೋಧ ನಡೆಸಿತು. ಈ ಸಂದರ್ಭದಲ್ಲಿ 24,275 ರೂಪಾಯಿ ಲಂಚದ ಹಣ ಪತ್ತೆಯಾಗಿದೆ.

ವರ್ತಕರು ಬಿಲ್‌ನಲ್ಲಿ ನಮೂದಿಸಿದ ಕೃಷಿ ಉತ್ಪನ್ನಗಳ ಪ್ರಮಾಣ ಹಾಗೂ ನಿಜವಾಗಿ ಮಾರಾಟ ಮಾಡಿರುವ ಉತ್ಪನ್ನಗಳ ಪ್ರಮಾಣದ ನಡುವೆ ಭಾರಿ ವ್ಯತ್ಯಾಸ ಇರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಮಾರುಕಟ್ಟೆಯಲ್ಲಿ ಕಾನೂನಿನ ಪ್ರಕಾರ ವಹಿವಾಟು ನಡೆಯುತ್ತಿರಲಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಲ ಕಡತಗಳನ್ನೂ ತನಿಖಾ ತಂಡ ವಶಪಡಿಸಿಕೊಂಡಿದೆ. ಅವುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.