ADVERTISEMENT

ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST

ಬೆಂಗಳೂರು: ನಗರದ ಜ್ಞಾನಭಾರತಿ, ಗಿರಿನಗರ ಮತ್ತು ಆರ್‌ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಕೇವಲ ಎರಡು ತಾಸುಗಳ ಅಂತರದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದಾರೆ.

ಡ್ರಾಪ್ ನೀಡುವ ನೆಪದಲ್ಲಿ ಸುರೇಂದ್ರಬಾಬು ಎಂಬುವವರನ್ನು ಕಾರಿನಲ್ಲಿ ಕರೆದೊಯ್ದ ದುಷ್ಕರ್ಮಿಗಳು ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿರುವ ಘಟನೆ ನಾಗರಬಾವಿ ವರ್ತುಲ ರಸ್ತೆಯಲ್ಲಿ ನಡೆದಿದೆ.

ರಾಮಕೃಷ್ಣನಗರ ನಿವಾಸಿಯಾದ ಸುರೇಂದ್ರಬಾಬು, ಟೈಲ್ಸ್ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕರಾಗಿದ್ದಾರೆ. ತಮಿಳುನಾಡಿಗೆ ಹೊರಟಿದ್ದ ಅವರು, ಮನೆಯಿಂದ ನಂದಿನಿಲೇಔಟ್ ವರ್ತುಲ ರಸ್ತೆಗೆ ನಡೆದು ಬಂದು ಶಾಂತಿನಗರಕ್ಕೆ ಹೋಗಲು ಬಿಎಂಟಿಸಿ ಬಸ್‌ಗೆ ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಡ್ರಾಪ್ ನೀಡುವುದಾಗಿ ಹೇಳಿ ಅವರನ್ನು ವಾಹನಕ್ಕೆ ಹತ್ತಿಸಿಕೊಂಡರು. ನಂತರ ನಾಗರಬಾವಿ ವರ್ತುಲ ರಸ್ತೆಗೆ ಕರೆದೊಯ್ದು ಮಾರಕಾಸ್ತ್ರಗಳಿಂದ ಬೆದರಿಸಿ 15 ಗ್ರಾಂ ಚಿನ್ನದ ಸರ, 9 ಸಾವಿರ ನಗದು ಮತ್ತು ಎಟಿಎಂ ಕಾರ್ಡ್ ಕಿತ್ತುಕೊಂಡಿದ್ದಾರೆ. ಬಳಿಕ ಕಾರಿನಿಂದ ಕೆಳಗಿಳಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಗಿರಿನಗರ: ನಾಯಂಡಹಳ್ಳಿ ಜಂಕ್ಷನ್‌ನಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, ದುಷ್ಕರ್ಮಿಗಳು ಚಿಂತನ್ ಎಂಬುವರ ಚಿನ್ನದ ಸರ, ಉಂಗುರ ಮತ್ತು ಹಣ ದರೋಡೆ ಮಾಡಿದ್ದಾರೆ.

ಬನ್ನೇರುಘಟ್ಟ ರಸ್ತೆಯ ರಾಮಯ್ಯಲೇಔಟ್ ನಿವಾಸಿಯಾದ ಚಿಂತನ್, ಮಂಗಳವಾರ ಮೈಸೂರಿಗೆ ಹೋಗಿದ್ದರು. ರಾತ್ರಿ 11.45ರ ಸುಮಾರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಗರಕ್ಕೆ ಬಂದ ಅವರು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಇಳಿದು ಆಟೊಗೆ ಕಾಯುತ್ತಿದ್ದರು.

ಈ ವೇಳೆ ಕಾರಿನಲ್ಲಿ ಬಂದ ಮೂವರು ಅಪರಿಚಿತರು, ಡ್ರಾಪ್ ನೀಡುವ ಸೋಗಿನಲ್ಲಿ ಅವರನ್ನು ಕರೆದೊಯ್ದು ಈ ಕೃತ್ಯ ಎಸಗಿದ್ದಾರೆ. ದರೋಡೆಯಾಗಿರುವ ವಸ್ತುಗಳ ಮೌಲ್ಯ ಸುಮಾರು ಒಂದು ಲಕ್ಷ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರ್‌ಎಂಸಿ ಯಾರ್ಡ್: ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ನಡೆದ ಮತ್ತೊಂದು ಪ್ರಕರಣದಲ್ಲಿ ಕೇಶವಮೂರ್ತಿ ಎಂಬುವರ ಚಿನ್ನದ ಸರ, ಉಂಗುರ ಮತ್ತು ಹಣವನ್ನು ದರೋಡೆ ಮಾಡಲಾಗಿದೆ.

ಕೇಶವಮೂರ್ತಿ ಕೆಲಸ ಮುಗಿಸಿಕೊಂಡು ಹೆಬ್ಬಾಳಕ್ಕೆ ಹೋಗಲೆಂದು ಬಿಎಂಟಿಸಿ ಬಸ್‌ಗೆ ಕಾಯುತ್ತಾ ನಿಂತಿದ್ದ ವೇಳೆ  ಕಾರಿನಲ್ಲಿ ಬಂದ ದುಷ್ಕರ್ಮಿಗಳು ಡ್ರಾಪ್ ನೀಡುವ ನೆಪದಲ್ಲಿ ಅವರನ್ನು ಕರೆದೊಯ್ದು ದರೋಡೆ ನಡೆಸಿದ್ದಾರೆ.

ಹಣ ಸೇರಿದಂತೆ 35 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಂದೇ ತಂಡದ ಕೃತ್ಯ?: `ಕೇವಲ ಎರಡು ತಾಸಿನ ಅಂತರದಲ್ಲಿ ಈ ಮೂರು ದರೋಡೆ ಪ್ರಕರಣಗಳು ನಡೆದಿವೆ. ಮೂರು ಸ್ಥಳಗಳಲ್ಲೂ ಕೃತ್ಯಕ್ಕೆ ಬಳಸಿರುವ ಕಾರಿನ ಲಕ್ಷಣಗಳ ನಡುವೆ ಸಾಮ್ಯತೆ ಇದೆ. ಜತೆಗೆ ಮೂರೂ ಪ್ರಕರಣಗಳು ಒಂದು ರೀತಿಯಲ್ಲಿ ನಡೆದಿವೆ. ಈ ಅಂಶಗಳನ್ನು ಗಮನಿಸಿದರೆ ಒಂದೇ ತಂಡದವರು ಈ ಕೃತ್ಯ ಎಸಗಿರುವ ಶಂಕೆ ಮೂಡುತ್ತದೆ. ಈ ಪ್ರಕರಣಗಳ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಅವರನ್ನು ಬಂಧಿಸಲಾಗುತ್ತದೆ~ ಎಂದು ಅಪರಾಧ ವಿಭಾಗದ (ಪಶ್ಚಿಮ) ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ `ಪ್ರಜಾವಾಣಿ~ಗೆ ತಿಳಿಸಿದರು.

ಘಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ದೂರುದಾರರಿಂದ ಮಾಹಿತಿ ಪಡೆದುಕೊಂಡ ಮೊಹಾಂತಿ ಅವರು, ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅಲ್ಲದೇ, ದರೋಡೆ ನಡೆದಿರುವ ಠಾಣಾ ವ್ಯಾಪ್ತಿಯ ಸಿಬ್ಬಂದಿ ಮತ್ತು ಉಪ ವಿಭಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.