ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆ ಕಾರ್ತಿಕ್‌ನಗರದಲ್ಲಿ ಭಾನುವಾರ ಮಧ್ಯಾಹ್ನ ನಿಂತಿದ್ದ ಲಾರಿಗೆ ಕೊರಿಯರ್ ವ್ಯಾನ್ ಡಿಕ್ಕಿ ಹೊಡೆದು ಯಲ್ಲಪ್ಪ (28) ಎಂಬುವರು ಸಾವನ್ನಪ್ಪಿದ್ದರೆ, ವರ್ತೂರು ರಸ್ತೆಯಲ್ಲಿ ಶನಿವಾರ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಶ್ಯಾಂಪ್ರಸಾದ್ (25) ಎಂಬುವರು ಮೃತಪಟ್ಟಿದ್ದಾರೆ.
ಮಹದೇವಪುರ ನಿವಾಸಿ ಯಲ್ಲಪ್ಪ, ಕೊರಿಯರ್ ವ್ಯಾನ್ ಚಾಲಕರಾಗಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಲಾರಿ ಚಾಲಕ ಮತ್ತು ಸ್ಕಾರ್ಪಿಯೊ ಕಾರು ಚಾಲಕ ಪೈಪೋಟಿ ಮೇಲೆ ವಾಹನ ಚಾಲನೆ ಮಾಡುತ್ತಿದ್ದರು. ಮುಂದೆ ಹೋಗುತ್ತಿದ್ದ ಲಾರಿಯ ಚಾಲಕ, ಕಾರಿನ ಚಾಲಕನಿಗೆ ಕೆಟ್ಟದಾಗಿ ಸಂಜ್ಞೆ ಮಾಡಿದ. ಇದರಿಂದ ಕೋಪಗೊಂಡ ಕಾರು ಚಾಲಕ, ವೇಗವಾಗಿ ವಾಹನ ಓಡಿಸಿ ಕಾರ್ತಿಕ್‌ನಗರದಲ್ಲಿ ಲಾರಿ ಅಡ್ಡಗಟ್ಟಿದ್ದಾನೆ. ಎರಡೂ ವಾಹನಗಳ ಚಾಲಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಕೊರಿಯರ್ ವ್ಯಾನ್‌ನ ಚಾಲಕ ಯಲ್ಲಪ್ಪ ಲಾರಿಗೆ ವಾಹನ ಗುದ್ದಿಸಿದ್ದಾರೆ. ಯಲ್ಲಪ್ಪ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ಮಾಹಿತಿ ನೀಡಿದರು.
ಕಾರು ಹಾಗೂ ಲಾರಿ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣ ಪೊಲೀಸರು ಹೇಳಿದರು
ಮತ್ತೊಂದು ಪ್ರಕರಣ: ವರ್ತೂರು ರಸ್ತೆಯ ತೌಲದಹಳ್ಳಿ ಬಳಿ ಬೈಕ್‌ಗೆ ಕಂಟೈನರ್ ಡಿಕ್ಕಿ ಹೊಡೆದು ಶ್ಯಾಂಪ್ರಸಾದ್ (25) ಎಂಬುವರು ಸಾವನ್ನಪ್ಪಿದ್ದು, ಅವರ ಸೋದರ ಸಂಬಂಧಿ ರಾಮರತ್ನಂ (22) ಎಂಬುವರು ಗಾಯಗೊಂಡಿದ್ದಾರೆ.
ಮೂಲತಃ ರಾಜಸ್ತಾನದವರಾದ, ಶ್ಯಾಂಪ್ರಸಾದ್ ಮತ್ತು ರಾಮರತ್ನಂ, ಔಷಧ ಮಾರಾಟ ಮಳಿಗೆಯಲ್ಲಿ ಕೆಲಸ ಕೆಲಸ ಮುಗಿಸಿಕೊಂಡು ರಾತ್ರಿ ಬೈಕ್‌ನಲ್ಲಿ ಮನೆಗೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಚಾಲಕ ಪ್ರವೀಣ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ವೈಟ್‌ಫೀಲ್ಡ್ ಪೊಲೀಸರು ಮಾಹಿತಿ ನೀಡಿದರು.
ಚಾಕುವಿನಿಂದ ಇರಿದು ಕೊಲೆ: ಎ. ನಾರಾಯಣಪುರದಲ್ಲಿ ದುಷ್ಕರ್ಮಿಗಳು ಶನಿವಾರ ರಾತ್ರಿ ಮುನಿಸ್ವಾಮಿ (56) ಎಂಬುವರಿಗೆ ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಮಹದೇವಪುರ ಬಳಿಯ ಉದಯನಗರ ನಿವಾಸಿಯಾದ ಮುನಿಸ್ವಾಮಿ, ರಾತ್ರಿ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಣ ದೋಚಿ ಪರಾರಿ: ಆಟೊದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ ಪ್ರತಾಪ್ ಸಿಂಹ ಎಂಬುವರಿಗೆ ಚಾಕುವಿನಿಂದ ಬೆದರಿಸಿ 9 ಸಾವಿರ ರೂಪಾಯಿ ಹಣ ದೋಚಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ದೆಹಲಿ ಮೂಲದ ಪ್ರತಾಪ್‌ಸಿಂಗ್, ರಾತ್ರಿ ಬ್ರಿಗೇಡ್ ರಸ್ತೆಯಲ್ಲಿ ಆಟೊಗಾಗಿ ಕಾಯುತ್ತಿದ್ದರು. ಆಟೊದಲ್ಲಿ ಅಲ್ಲಿಗೆ ಬಂದ ಇಬ್ಬರು, ಅವರನ್ನು ಮಲ್ಲೇಶ್‌ಪಾಳ್ಯಕ್ಕೆ ಬಿಡಲು ಒಪ್ಪಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಬೆದರಿಸಿದರು. ಸಮೀಪದ ಎಟಿಎಂ ಘಟಕಕ್ಕೆ ಕರೆದೊಯ್ದ ಆರೋಪಿಗಳು, 9 ಸಾವಿರ ರೂಪಾಯಿ ಡ್ರಾ ಮಾಡಿಸಿಕೊಂಡು ಕಳುಹಿಸಿದ್ದಾರೆ ಎಂದು ಕಾಟನ್‌ಪೇಟೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.