ADVERTISEMENT

ಲಾರಿ ಡಿಕ್ಕಿ: ಇಬ್ಬರು ಟೆಕ್ಕಿಗಳ ಸಾವು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:41 IST
Last Updated 15 ಮಾರ್ಚ್ 2014, 19:41 IST

ಬೆಂಗಳೂರು: ಕುಂದಲಹಳ್ಳಿ ಮುಖ್ಯರಸ್ತೆ­ಯಲ್ಲಿ ಶುಕ್ರವಾರ ಮಧ್ಯಾಹ್ನ ಲಾರಿ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗುರುರಾಜಶೆಟ್ಟಿ (35) ಮತ್ತು ರೂಬೇಶ್ ಮಹಾಲಿಂಗಂ (34) ಎಂಬ ಇಬ್ಬರು ಸಾಫ್ಟ್‌ವೇರ್‌ ಕಂಪೆನಿ ಉದ್ಯೋಗಿಗಳು ಸಾವನ್ನಪ್ಪಿದ್ದಾರೆ.

ಮುಂಬೈ ಮೂಲದ ಗುರುರಾಜ­ಶೆಟ್ಟಿ, ವೈಟ್‌ಫೀಲ್ಡ್‌ ಸಮೀಪದ ಸೀಗೆ­ಹಳ್ಳಿ­ಯಲ್ಲಿ ವಾಸವಾಗಿದ್ದರು. ರೂಬೇಶ್‌ ತಮಿಳುನಾಡು ಮೂಲ­ದವರಾ­ಗಿದ್ದು, ನಗರದ ಚನ್ನಸಂದ್ರದಲ್ಲಿ ನೆಲೆಸಿದ್ದರು.

ಇಬ್ಬರೂ ಕುಂದಲಹಳ್ಳಿ ಮುಖ್ಯರಸ್ತೆಯ ಬ್ರೂಕ್‌ಫೀಲ್ಡ್‌­ನಲ್ಲಿರುವ ಇಂಟೆಲ್‌ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಎಂದಿನಂತೆ ಶುಕ್ರವಾರ ಕೆಲಸಕ್ಕೆ ಹೋಗಿದ್ದ ಅವರು, ಮಧ್ಯಾಹ್ನ 2.15ರ ಸುಮಾರಿಗೆ ಊಟಕ್ಕೆಂದು  ಟಿನ್‌­ಫ್ಯಾಕ್ಟರಿ ಸಮೀಪದ ಹೋಟೆಲ್‌ಗೆ ಹೋಗಿದ್ದಾರೆ. ಊಟ ಮುಗಿಸಿಕೊಂಡು ಬೈಕ್‌ನಲ್ಲಿ ಕಂಪೆನಿಗೆ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ.

ಕೆ.ಆರ್‌.ಪುರ ಕಡೆಗೆ ಹೋಗುತ್ತಿದ್ದ ಲಾರಿ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕೆಳಗೆ ಬಿದ್ದ ರೂಬೇಶ್‌ ಮೇಲೆ ವಾಹನದ ಚಕ್ರ ಹರಿದಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಲೆಗೆ ಗಂಭೀರ ಪೆಟ್ಟು ಬಿದ್ದು ಸಮೀ­ಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯುತ್ತಿದ್ದ ಗುರುರಾಜಶೆಟ್ಟಿ, ಚಿಕಿತ್ಸೆಗೆ ಸ್ಪಂದಿ­ಸದೆ ರಾತ್ರಿ 12ಕ್ಕೆ ಕೊನೆಯು­ಸಿರೆ­ಳೆದರು.

ಚಾಲಕನನ್ನು ಬಂಧಿಸಿ, ಲಾರಿ-­ಯನ್ನು ಜಪ್ತಿ ಮಾಡಲಾಗಿದೆ ಎಂದು ವೈಟ್‌ಫೀಲ್ಡ್‌ ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಮಹಿಳೆ ಸಾವು
ಸುಮನಹಳ್ಳಿ ವರ್ತುಲ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ ಅಪರಿಚಿತ ವಾಹನ ಹರಿದು ಯಶೋಧಮ್ಮ (50) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಲಗ್ಗೆರೆ ನಿವಾಸಿಯಾದ ಯಶೋ­ಧಮ್ಮ, ಮಗಳಾದ ಕೆಂಗೇರಿಯಲ್ಲಿರುವ ಇಂದ್ರಾಣಿ ಮನೆಗೆ ಹೊರಟಿದ್ದರು. ಬೆಳಿಗ್ಗೆ 4.20ರ ಸುಮಾರಿಗೆ ಸಮೀಪದ ಬಸ್‌ ನಿಲ್ದಾಣಕ್ಕೆ ನಡೆದು ಹೋಗುವಾಗ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಕೆಳಗೆ ಬಿದ್ದ ಅವರ ಮೇಲೆ ವಾಹನದ ಚಕ್ರ ಹರಿದಿ­ದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಾಹನ ಡಿಕ್ಕಿ ವ್ಯಕ್ತಿ ಸಾವು
ಗೊರಗುಂಟೆಪಾಳ್ಯದಲ್ಲಿ ಶನಿವಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಯ ಗುರುತು ಪತ್ತೆ­ಯಾಗಿಲ್ಲ. ಅವರ ವಯಸ್ಸು ಸುಮಾರು 40 ರಿಂದ 45 ವರ್ಷ. ಬೆಳಿಗ್ಗೆ 6.15ಕ್ಕೆ ಗೊರಗುಂಟೆಪಾಳ್ಯದಲ್ಲಿ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನ­ಪ್ಪಿದ್ದಾರೆ ಎಂದು ಯಶವಂತಪುರ ಸಂಚಾರ ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಯಶವಂತಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.