ADVERTISEMENT

ಲಾಲ್‌ಬಾಗ್‌ ಪ್ರವೇಶ ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:43 IST
Last Updated 20 ಸೆಪ್ಟೆಂಬರ್ 2013, 19:43 IST

ಬೆಂಗಳೂರು: ಲಾಲ್‌ಬಾಗ್‌ ಉದ್ಯಾನದ ಪ್ರವೇಶ ಶುಲ್ಕ ಹೆಚ್ಚಿಸಲು ತೋಟಗಾರಿಕೆ ಇಲಾಖೆಯ ನಿರ್ದೇಶಕರು ಇಲಾಖೆಯ ಪ್ರಧಾನ ಕಾಯದರ್ಶಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಪ್ರಸ್ತಾವಕ್ಕೆ ಒಪ್ಪಿಗೆ ದೊರೆತರೆ ಪ್ರವೇಶ ಶುಲ್ಕ ಈಗಿರುವ ರೂ. 10ರಿಂದ ರೂ. 20ಕ್ಕೆ ಹೆಚ್ಚಳವಾಗಲಿದೆ.

‘ನಗರದ ಉಳಿದ ಪ್ರೇಕ್ಷಣೀಯ ಸ್ಥಳಗಳ ಪ್ರವೇಶ ಧನ ದುಬಾರಿಯಾಗಿದೆ. ಅದಕ್ಕೆ ಹೋಲಿಸಿದರೆ ಲಾಲ್‌ಬಾಗ್‌ ಶುಲ್ಕ ತುಂಬಾ ಕಡಿಮೆ. ಹತ್ತು ವರ್ಷಗಳಿಂದ ದರ ಪರಿಷ್ಕರಣೆ ಮಾಡಿರಲಿಲ್ಲ. ಉದ್ಯಾನದ ಅಭಿವೃದ್ಧಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಶುಲ್ಕ ಹೆಚ್ಚಳದ ಪ್ರಸ್ತಾವ ಸಲ್ಲಿಸಿರುವುದು ನಿಜ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ­ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಯಾನದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಜನ ಅಪೇಕ್ಷೆ ಮಾಡುತ್ತಾರೆ. ಲಾಲ್‌ಬಾಗ್‌ ಮಾತ್ರವಲ್ಲದೆ ಇನ್ನೂ 21 ಉದ್ಯಾನಗಳನ್ನು  ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿದೆ. ನೀರು, ದೀಪ, ವಾಕಿಂಗ್‌ ಪಾತ್‌ ಮೊದಲಾದ ಸೌಕರ್ಯ ಒದಗಿಸಲು ಹಣಕಾಸಿನ ಅಗತ್ಯವಿದೆ’ ಎಂದು ಅಧಿಕಾರಿಗಳು ಹೇಳಿದರು.

ಲಾಲ್‌ಬಾಗ್‌ ಉದ್ಯಾನದ ಪ್ರವೇಶ ಧನ ಸಂಗ್ರಹಕ್ಕೆ ಖಾಸಗಿ ಸಂಸ್ಥೆಗೆ ನೀಡಲಾಗಿದ್ದ ಮೂರು ವರ್ಷದ ಗುತ್ತಿಗೆ ಅವಧಿ ಆಗಸ್ಟ್‌ನಲ್ಲಿ ಕೊನೆಗೊಂಡಿದ್ದು, ದರ ಪರಿಷ್ಕರಣೆಗಾಗಿ ಕಾದಿ­ರುವ ಇಲಾಖೆ ಇನ್ನೂ ಹೊಸ ಟೆಂಡರ್‌ ಕರೆದಿಲ್ಲ. ಮೊದಲು ರೂ. 2 ಇದ್ದ ಶುಲ್ಕ ಬಳಿಕ ರೂ. 5ಕ್ಕೆ ಏರಿಸಲಾಗಿತ್ತು. 2000ರಲ್ಲಿ ಆ ದರವನ್ನು ರೂ. 10ಕ್ಕೆ ಏರಿಸಲಾಗಿತ್ತು. ಈಗ ದುಪ್ಪಟ್ಟು ಮಾಡುವ ಪ್ರಸ್ತಾವ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.