ADVERTISEMENT

ಲೆಕ್ಕಕ್ಕಿಲ್ಲದ ಸರ್ಕಾರಿ ಆದೇಶ: ಅಧಿಕಾರಿಗಳ ವಿದೇಶ ಪ್ರವಾಸ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಬೆಂಗಳೂರು: ವಿದೇಶ ಪ್ರವಾಸ ರದ್ದುಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ನಂತರವೂ ಮೂಲಸೌಲಭ್ಯ ಇಲಾಖೆ ಕಾರ್ಯದರ್ಶಿ ರಾಜಕುಮಾರ್ ಖತ್ರಿ ಸೇರಿದಂತೆ ಕೆಲ ಅಧಿಕಾರಿಗಳು ವಿದೇಶ ಪ್ರವಾಸ ತೆರಳಿದ್ದಾರೆ.

ವಿಶ್ವ ಬಂಡವಾಳ ಹೂಡಿಕೆ ಸಮಾವೇಶದ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ವಿದೇಶ ಪ್ರವಾಸದಲ್ಲಿದ್ದು, ಅದರಲ್ಲಿ ಭಾಗವಹಿಸಲು ಖತ್ರಿ ತೆರಳಿದ್ದಾರೆ.
ಬರ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿದೇಶ ಪ್ರವಾಸವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ರದ್ದುಪಡಿಸಿದ್ದರು. ಇದಕ್ಕೆ ಪೂರಕವಾಗಿ ಸರ್ಕಾರವೂ ಸುತ್ತೋಲೆ ಹೊರಡಿಸಿತ್ತು. ಅದರ ಹೊರತಾಗಿಯೂ ಶನಿವಾರ ರಾತ್ರಿ ಖತ್ರಿ ಅವರು ತೈವಾನ್‌ಗೆ ತೆರಳಿದ್ದಾರೆ.

ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಕೆ.ವಿ.ರಾಜು ಮತ್ತು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ವಿ.ನಾಗರಾಜನ್ ಕೂಡ ವಿದೇಶ ಪ್ರವಾಸ ತೆರಳಿದ್ದಾರೆ ಎಂದು ಗೊತ್ತಾಗಿದೆ.

ಸಚಿವರ ಪ್ರವಾಸ: ಸಚಿವ ಎ.ನಾರಾಯಣಸ್ವಾಮಿ ಅವರು ತಮ್ಮ ಕುಟುಂಬ ಸದಸ್ಯರ ಜತೆ ಇಟಲಿ ಮತ್ತು ಫ್ರಾನ್ಸ್ ದೇಶಕ್ಕೆ ತೆರಳಿದ್ದಾರೆ.ಇದು ಖಾಸಗಿ ಪ್ರವಾಸವಾದ ಕಾರಣ, ಅದಕ್ಕೆ ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.