ADVERTISEMENT

ಲೋಕಾಯುಕ್ತ ದಾಳಿ: ವಿಶ್ವನಾಥ್ ಆಪ್ತರ ಬಳಿ 90 ಕ್ರಯಪತ್ರ!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಸಂಬಂಧಿಗಳು, ಸ್ನೇಹಿತರು ಮತ್ತು ವ್ಯಾವಹಾರಿಕ ಪಾಲುದಾರರ ಮನೆ, ಕಚೇರಿಗಳ ಮೇಲೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, 90ಕ್ಕೂ ಹೆಚ್ಚು ಕ್ರಯಪತ್ರ ಸೇರಿದಂತೆ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಶ್ವನಾಥ್  ಸಂಬಂಧಿ ಸೋಮಶೇಖರ ರೆಡ್ಡಿ ಮನೆ, ಬಿಜೆಪಿ ಕಾರ್ಯಕರ್ತ ರಾಮಲಿಂಗೇಗೌಡ ಮನೆ, ವಿಶ್ವನಾಥ್ ಪತ್ನಿ ಪಾಲುದಾರರಾಗಿರುವ ವೆಂಕಟೇಶ್ವರ ಸರ್ವಿಸ್ ಸ್ಟೇಷನ್ ಮತ್ತು ಪೆಟ್ರೋಲ್ ಬಂಕ್, ಶಾಸಕರ ಸ್ನೇಹಿತ ಸತೀಶ್ ಎಂಬುವರ ಮನೆ ಮೇಲೆ ದಾಳಿ ನಡೆದಿದೆ. ಯಲಹಂಕ ಉಪ ನಗರದಲ್ಲಿರುವ ರಾಮಲಿಂಗೇಗೌಡರ ಕಚೇರಿ ಮತ್ತು ಶಾಸಕರ ಸಂಬಂಧಿ ವಿನಯಕುಮಾರ್ ಎಂಬುವರ ಮನೆಗಳಲ್ಲೂ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದಾರೆ.

ಸೋಮಶೇಖರ ರೆಡ್ಡಿ ಮನೆಯಲ್ಲಿ ಸ್ಥಿರಾಸ್ತಿ ಖರೀದಿಗೆ ಸಂಬಂಧಿದ 40 ಕ್ರಯಪತ್ರಗಳು ತನಿಖಾ ತಂಡಕ್ಕೆ ದೊರೆತಿವೆ. ಈ ದಾಖಲೆಗಳು ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿವೆ. 13 ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳು, ಮೂರು ದ್ವಿಚಕ್ರ ವಾಹನಗಳು, ಕ್ಯಾಪ್ಟಿವಾ, ಐಟೆನ್ ಮತ್ತು ಸ್ವಿಫ್ಟ್ ಕಾರುಗಳ ಒಡೆತನದ ದಾಖಲೆಗಳು,  ಏಳು ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ADVERTISEMENT

ರಾಮಲಿಂಗೇಗೌಡ ನಿವಾಸದಲ್ಲಿ ಕೂಡ 40ಕ್ಕೂ ಹೆಚ್ಚು ಕ್ರಯಪತ್ರಗಳು ದೊರೆತಿವೆ. ಇನ್ನೊವಾ, ಸ್ವಿಫ್ಟ್ ಕಾರುಗಳ ದಾಖಲೆಗಳು ಮತ್ತು ಟೊಯೊಟಾ ಫಾರ್ಚೂನರ್ ಖರೀದಿಗೆ ಮುಂಗಡ ಪಾವತಿಸಿರುವ ರಸೀದಿಗಳು ಲಭ್ಯವಾಗಿವೆ. ಒಂದು ಚಿಲ್ಲರೆ ಮದ್ಯದಂಗಡಿ, ಒಂದು ಬಾರ್ ಹಾಗೂ ಒಂದು ಬಾರ್ ಮತ್ತು ರೆಸ್ಟೋರೆಂಟ್ ಒಡೆತನದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. 1.1 ಕೆ.ಜಿ. ಚಿನ್ನಾಭರಣ ಮತ್ತು 13 ಕೆ.ಜಿ. ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಶ್ವನಾಥ್ ಪತ್ನಿ ವಾಣಿಶ್ರೀ ಪಾಲುದಾರರಾಗಿರುವ ಪೆಟ್ರೋಲ್ ಬಂಕ್‌ನಲ್ಲಿ ನಾಲ್ಕು ಸ್ಥಿರಾಸ್ತಿಯ ಕ್ರಯಪತ್ರಗಳು, ಹತ್ತು ಬ್ಯಾಂಕ್ ಖಾತೆಗಳ ವಿವರಗಳು ದೊರೆತಿವೆ. ಸತೀಶ್ ನಿವಾಸದಲ್ಲಿ ಐದು ಕ್ರಯಪತ್ರಗಳು, ಇನ್ನೊವಾ ಮತ್ತು ಸ್ಯಾಂಟ್ರೊ ಕಾರುಗಳ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ರಾಮಲಿಂಗೇಗೌಡರ ಕಚೇರಿ ಮತ್ತು ವಿನಯಕುಮಾರ್ ಮನೆಯಲ್ಲೂ ಹಲವು ದಾಖಲೆಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ.

ನಂಟು ಪತ್ತೆ

ಗುರುವಾರ ದಾಳಿಗೆ ಒಳಗಾಗಿರುವ ವ್ಯಕ್ತಿಗಳ ಜೊತೆ ವಿಶ್ವನಾಥ್ ವ್ಯಾವಹಾರಿಕ ನಂಟು ಹೊಂದಿರುವ ಬಗ್ಗೆ ತನಿಖಾ ತಂಡಕ್ಕೆ ಮಹತ್ವದ ದಾಖಲೆಗಳು ದೊರೆತಿವೆ. ನೇರವಾಗಿ ವಿಶ್ವನಾಥ್ ಅವರ ಹೆಸರಿನಲ್ಲಿರುವ ಕೆಲವು ಕ್ರಯಪತ್ರಗಳು ಸೋಮಶೇಖರ ರೆಡ್ಡಿ ಮತ್ತು ರಾಮಲಿಂಗೇಗೌಡ ಅವರ ಮನೆಗಳಲ್ಲಿ ಪತ್ತೆಯಾಗಿವೆ. ಬೇನಾಮಿ ವ್ಯವಹಾರವನ್ನು ಸಾಬೀತುಪಡಿಸಬಲ್ಲ ದಾಖಲೆಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಅಲ್ಲಾಳಸಂದ್ರದ ವಿ.ಶಶಿಧರ್ ಎಂಬುವರು ಶಾಸಕ ವಿಶ್ವನಾಥ್ ವಿರುದ್ಧ ಸಲ್ಲಿಸಿದ್ದ ಖಾಸಗಿ ದೂರಿನ ಬಗ್ಗೆ ತನಿಖೆಗೆ ನಡೆಸುವಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.

ಈ ಸಂಬಂಧ ಮೊಕದ್ದಮೆ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ಕಳೆದ ಡಿಸೆಂಬರ್‌ನಲ್ಲಿ ವಿಶ್ವನಾಥ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈಗ ಸಂಬಂಧಿಕರು ಮತ್ತು ಸ್ನೇಹಿತರ ಮನೆ ಮೇಲೆ ದಾಳಿ ನಡೆದಿದೆ.
ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ನೇತೃತ್ವದಲ್ಲಿ ಗುರುವಾರ ನಡೆದ ದಾಳಿಯಲ್ಲಿ ಡಿವೈಎಸ್‌ಪಿಗಳಾದ ಎಸ್.ಗಿರೀಶ್, ಎಚ್.ಎಸ್.ಮಂಜುನಾಥ್, ಅಬ್ದುಲ್ ಅಹದ್, ಪ್ರಸನ್ನ ವಿ.ರಾಜು, ಹತ್ತು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.