ಬೆಂಗಳೂರು: `ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ವಕೀಲರು ಮತ್ತು ಮಾಧ್ಯಮದವರ ನಡುವಿನ ಗಲಾಟೆ ಹಿನ್ನೆಲೆಯಲ್ಲಿ ಒಂದು ವಾರದೊಳಗೆ ಸರಿಯಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಕೀಲರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು~ ಎಂದು ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಸ್ವಾಮಿ ಇಲ್ಲಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಮಾಧ್ಯಮದವರ ಮೇಲೆ ವಕೀಲರು ನಡೆಸಿದ ಹಲ್ಲೆ ಬಗ್ಗೆ ವಕೀಲರ ಪರಿಷತ್ತು ಸರಿ ಕ್ರಮ ಕೈಗೊಂಡಿಲ್ಲ~ ಎಂದು ಆರೋಪಿಸಿದರು.
`ವಕೀಲರು ನ್ಯಾಯಾಲಯದ ಆವರಣದಲ್ಲಿ ಹದ್ದು ಮೀರಿ ವರ್ತಿಸಿದರೆ, ಅಥವಾ ಅಸಭ್ಯವಾಗಿ ವರ್ತಿಸಿದರೆ, ಬಾರ್ ಕೌನ್ಸಿಲ್ ಅಂತಹ ವಕೀಲರ ವಕೀಲ ವೃತ್ತಿಯ ಪರವಾನಗಿಯನ್ನು ರದ್ದು ಮಾಡುವಂಥ ಕ್ರಮವನ್ನು ವಕೀಲ ಪರಿಷತ್ತು ತೆಗೆದುಕೊಳ್ಳಬಹುದು. ಆದರೆ ಆ ಕಾರ್ಯಕ್ಕೆ ವಕೀಲರ ಪರಿಷತ್ತು ಮುಂದಾಗಿಲ್ಲ~ ಎಂದರು.
`ಕಳೆದ 2009 ರಲ್ಲಿ ತಮಿಳುನಾಡಿನ ಮದ್ರಾಸ್ ಹೈಕೋರ್ಟ್‌ನ ವಕೀಲರು ಇದೇ ರೀತಿ ಗಲಾಟೆ ನಡೆಸಿದಾಗ ಅದರ ವಿಚಾರಣೆಗಾಗಿ ರಚಿಸಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ ಅವರ ಸಮಿತಿಯು ಮಧ್ಯಂತರ ವರದಿಯಲ್ಲಿ ತಿಳಿಸಿರುವ ವಕೀಲರ ವರ್ತನೆಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತಂದಿದ್ದರೆ ಇಂದು ವಕೀಲರು ಈ ರೀತಿ ಎಲ್ಲೆ ಮೀರಿ ವರ್ತಿಸುತ್ತಿರಲಿಲ್ಲ~ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.