ADVERTISEMENT

ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪುರ ಸಮೀಪದ ದೇವಸಂದ್ರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಜ್ಞಾನಭಾರತಿ ಸಮೀಪದ ಮರಿಯಪ್ಪನಪಾಳ್ಯ ನಿವಾಸಿ ಮೋಹನ್‌ರಾವ್ ಎಂಬುವರ ಪತ್ನಿ ಶೀತಲ್ (27) ಆತ್ಮಹತ್ಯೆ ಮಾಡಿಕೊಂಡವರು. ಅವರ ವಿವಾಹವಾಗಿ ಎರಡು ವರ್ಷಗಳಾಗಿದ್ದವು ಮತ್ತು ಅವರಿಗೆ 11 ತಿಂಗಳ ಹೆಣ್ಣು ಮಗುವಿದೆ.

ಮನೆಯ ಸಮೀಪವೇ ಹೋಟೆಲ್ ಇಟ್ಟುಕೊಂಡಿದ್ದ ಮೋಹನ್‌ರಾವ್ ವ್ಯವಹಾರದಲ್ಲಿ ನಷ್ಟ ಅನುಭವಿಸಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸುವ ಉದ್ದೇಶಕ್ಕಾಗಿ ಆತ ತವರು ಮನೆಯಿಂದ ಹಣ ತರುವಂತೆ ಪತ್ನಿಗೆ ಪೀಡಿಸುತ್ತಿದ್ದ.

ಇದರಿಂದ ಬೇಸರಗೊಂಡಿದ್ದ ಶೀತಲ್ ಅವರು ದೇವಸಂದ್ರದಲ್ಲಿರುವ ತವರು ಮನೆಗೆ ಬಂದು ನೆಲೆಸಿದ್ದರು ಎಂದು ಕೆ.ಆರ್.ಪುರ ಪೊಲೀಸರು ಹೇಳಿದ್ದಾರೆ.ಆಗಾಗ್ಗೆ ಪತ್ನಿಯ ತವರು ಮನೆಗೆ ಬರುತ್ತಿದ್ದ ಮೋಹನ್‌ರಾವ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದಿದ್ದ ಅವರು ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

`ಅಳಿಯ ಹಣಕ್ಕಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದ. ಈ ಕಾರಣದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ~ ಎಂದು ಶೀತಲ್ ತಂದೆ ಶ್ಯಾಮ್‌ಸುಂದರ್ ಅವರು ದೂರು ಕೊಟ್ಟಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಮೋಹನ್‌ರಾವ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೂರು ದಾಖಲು: ಸಂದೀಪ್ (11) ಎಂಬ ಬಾಲಕ ಕುರುಬರಹಳ್ಳಿಯ ಕೆಂಪೇಗೌಡ ಮೈದಾನದ ಬಳಿ ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗವು (ಎಸ್‌ಎಚ್‌ಆರ್‌ಸಿ) ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ಸಂದೀಪ್ ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿದ ಎಸ್‌ಎಚ್‌ಆರ್‌ಸಿ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರು, `ಘಟನೆ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ~ ಎಂದರು.

`ಮೈದಾನದಲ್ಲಿ ರಂಗಮಂದಿರ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ.~ ಎಂದು ನಾಯಕ್ ಹೇಳಿದರು.`ಘಟನೆ ಸಂಬಂಧ ಸ್ಪಷ್ಟನೆ ಕೋರಿ ಬಿಬಿಎಂಪಿ ಆಯುಕ್ತರಿಗೆ ಸದ್ಯದಲ್ಲೇ ನೋಟಿಸ್ ಜಾರಿ ಮಾಡಲಾಗುತ್ತದೆ. ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗುತ್ತದೆ~ ಎಂದು ತಿಳಿಸಿದರು.

`ರಂಗಮಂದಿರದ ಪಿಲ್ಲರ್‌ಗಳ ನಿರ್ಮಾಣಕ್ಕಾಗಿ ಮೈದಾನದಲ್ಲಿ ಬೃಹತ್ ಗುಂಡಿಗಳನ್ನು ತೆಗೆದು ನಾಲ್ಕು ತಿಂಗಳು ಕಳೆದಿದ್ದರೂ ಈವರೆಗೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಅಲ್ಲದೇ ಗುಂಡಿಗಳ ಸುತ್ತ ತಂತಿ ಬೇಲಿ ಅಳವಡಿಸಿರಲಿಲ್ಲ ಮತ್ತು ಸೂಚನಾ ಫಲಕಗಳನ್ನು ಸಹ ಹಾಕಿರಲಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದೆ~ ಎಂದರು. ಘಟನೆ ಸಂಬಂಧ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಆಯೋಗದ ಐಜಿಪಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.