ADVERTISEMENT

ವಾರದೊಳಗೆ ಚರ್ಚಿಸಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 19:00 IST
Last Updated 13 ಮಾರ್ಚ್ 2011, 19:00 IST

ಬೆಂಗಳೂರು: ‘ಬಿಬಿಎಂಪಿಯ 11 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಧಿಕಾರಾವಧಿಯನ್ನು ಆರು ತಿಂಗಳಿಗೆ ಮೊಟಕುಗೊಳಿಸಬೇಕೇ ಅಥವಾ ಮುಂದುವರಿಸಬೇಕೇ ಎಂಬುದರ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಒಂದು ವಾರದ ಒಳಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ನಗರದ ಕಾಮಾಕ್ಷಿಪಾಳ್ಯ ವಾರ್ಡ್‌ನಲ್ಲಿ ಸಂಸದರ ನಿಧಿಯಿಂದ ರೂಪುಗೊಂಡಿರುವ ಕಿರು ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮೇಯರ್ ಅವರ ಅಧಿಕಾರಾವಧಿ ಕೊನೆಗೊಳ್ಳುವಾಗಲೇ ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರಾವಧಿ ಪೂರ್ಣಗೊಳ್ಳಬೇಕು ಎಂಬುದು ನಿಯಮ. ಆದರೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಹೊರತುಪಡಿಸಿ ಉಳಿದ 11 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ವಿಳಂಬವಾಗಿ ನಡೆದ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಭವಿಸಿದೆ’ ಎಂದರು.

‘ಮೇಯರ್ ಎಸ್.ಕೆ. ನಟರಾಜ್ ಅವರ ಅಧಿಕಾರಾವಧಿ ಏಪ್ರಿಲ್ 23ಕ್ಕೆ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲಿ ಸಮಸ್ಯೆಯನ್ನು ಚರ್ಚಿಸಿ ಒಂದು ವಾರದ ಒಳಗಾಗಿ ನಿರ್ಧಾರ ಕೈಗೊಳ್ಳಲಾಗುವುದು. ಬೆಳಗಾವಿ ಪಾಲಿಕೆಯಲ್ಲಿ ಇಂಥದ್ದೇ ಸಮಸ್ಯೆ ಉಂಟಾಗಿ ಅಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆದೇ ಇಲ್ಲ’ ಎಂದು ತಿಳಿಸಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಮಾಕ್ಷಿಪಾಳ್ಯ ವಾರ್ಡ್‌ನ ಕಾರೇಕಲ್ಲು, ಹರಿಜನ ಕಾಲೋನಿ ಹಾಗೂ ಕಾಮಾಕ್ಷಿಪಾಳ್ಯ ಹಳೇ ಗ್ರಾಮದ ಜನರಿಗೆ ಹಕ್ಕುಪತ್ರಗಳನ್ನು ಶೀಘ್ರವೇ ವಿತರಿಸಲಾಗುವುದು’ ಎಂದು ಅವರು ಹೇಳಿದರು.  ಸಂಸದ ಪಿ.ಸಿ.ಮೋಹನ್ ಮಾತನಾಡಿ, ‘ಸಂಸದರ ನಿಧಿಯಿಂದ ಪ್ರಸ್ತುತ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಕಿರು ನೀರು ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಸಂಸದರ ನಿಧಿಯನ್ನು 5 ಕೋಟಿಗೆ ಹೆಚ್ಚಳ ಮಾಡಲಿರುವ ಹಿನ್ನೆಲೆಯಲ್ಲಿ ವಾರ್ಡ್‌ಗೆ ಅಧಿಕ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.ಪಾಲಿಕೆ ಸದಸ್ಯ ಕೆ.ರಂಗಣ್ಣ, ಬಿಜೆಪಿ ಮಂಡಲಿ ಅಧ್ಯಕ್ಷ ಮಲ್ಲಿಕಾರ್ಜುನ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಸ್ತೆ ವಿಸ್ತರಣೆ; ಅಂದಾಜು ಪಟ್ಟಿ ಸಿದ್ಧ
ಬೆಂಗಳೂರು: ‘ಬೇಗೂರು ಕೆರೆ ಏರಿ ರಸ್ತೆಯು ಕಿರಿದಾಗಿದ್ದು, ವಾಹನ ದಟ್ಟಣೆ ಉಂಟಾಗುತ್ತಿದೆ. ಹಾಗಾಗಿ ಹಾಲಿ ರಸ್ತೆಯನ್ನು 18 ಮೀಟರ್‌ಗೆ ವಿಸ್ತರಿಸಲು 7.38 ಕೋಟಿ ರೂಪಾಯಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಬಿಬಿಎಂಪಿ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ರವೀಂದ್ರ ಹೇಳಿದರು.

ಬೇಗೂರು ಪ್ರದೇಶದಲ್ಲಿ ಇತ್ತೀಚೆಗೆ ಪರಿಶೀಲನೆ ನಡೆಸಿದ ಅವರು. ‘ಬೇಗೂರು ಕೆರೆ ರಸ್ತೆಯು ಸದ್ಯ 20 ಅಡಿ ಅಗಲವಿದೆ. ಇದು ಹೊಸೂರು ರಸ್ತೆಯಿಂದ ಬನ್ನೆರುಘಟ್ಟ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ. ಆ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಿಸಲು ನಿರ್ಧರಿಸಲಾಗಿದೆ. ಅದರಂತೆ ವಿಸ್ತರಣೆಗೆ ಅಗತ್ಯವಾದ ಜಾಗವನ್ನು ಟಿ.ಡಿ.ಆರ್ ನೀಡಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.  ‘ಹುಳಿಮಾವು- ಬೇಗೂರು ರಸ್ತೆಯು 12 ಮೀಟರ್ ಅಗಲವಿದ್ದು, ಹಾಲಿ ರಸ್ತೆಯನ್ನು 24 ಮೀಟರ್‌ಗೆ ವಿಸ್ತರಿಸುವ ಕಾರ್ಯ ಪ್ರಗತಿಯಲ್ಲಿದೆ.

ತಾಯಪ್ಪ ಗಾರ್ಡನ್ ರಸ್ತೆಯ ಅಗಲ 18 ಮೀಟರ್ ಇದೆ. ಸುಮಾರು 2.25 ಕೋಟಿ ರೂಪಾಯಿ ವೆಚ್ಚದಲ್ಲಿ 24 ಮೀಟರ್‌ಗೆ ವಿಸ್ತರಿಸುವ ಹಾಗೂ ಅಭಿವೃದ್ಧಿಪಡಿಸುವ ಕಾಮಗಾರಿ ಶೇ 70ರಷ್ಟು ಪೂರ್ಣಗೊಂಡಿದೆ. ಹಾಗೆಯೇ ಬೇಗೂರು ಕೆರೆಯಲ್ಲಿ ದೋಣಿ ವಿಹಾರ ಸೌಲಭ್ಯ ಸೇರಿದಂತೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.