ADVERTISEMENT

ವಿಜೃಂಭಣೆಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:10 IST
Last Updated 18 ಏಪ್ರಿಲ್ 2012, 19:10 IST

ಪೀಣ್ಯ ದಾಸರಹಳ್ಳಿ: ನಗರದ ಹೆಸರಘಟ್ಟ ರಸ್ತೆಯಲ್ಲಿರುವ ಚಿಕ್ಕಬಾಣಾವರದ ಕೋಟೆ ಮಾರಮ್ಮ ದೇವಿಯ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.

ಗ್ರಾಮ ದೇವತೆಯ ಜಾತ್ರಾ ಮಹೋತ್ಸವಕ್ಕೆ ವಾರದ ಹಿಂದೆಯೇ ಚಾಲನೆ ಸಿಕ್ಕಿತು. ವಾರದ ಪ್ರತಿ ದಿನವೂ ಪಟ್ಟಂದರಮ್ಮ ದೇವಿ, ಮೈಸೂರು ಅಮ್ಮ, ಚೆನ್ನಕೇಶವಸ್ವಾಮಿ, ಬಸವಣ್ಣ, ಗಂಗಮ್ಮ, ಚಂದ್ರಮೌಳೇಶ್ವರ, ರಾಮದೇವರು, ಕೋಟೆ ಮಾರಮ್ಮ, ಕೂರ್ಮಾನಹಳ್ಳಿ ಆಂಜನೇಯ ಸ್ವಾಮಿಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೊನೆಯ ದಿನ ಹೂವಿನ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಚಿಕ್ಕಬಾಣಾವರ ಹಳೇ ಗ್ರಾಮ, ವೀರಶೆಟ್ಟಿಹಳ್ಳಿ, ಮಾರುತಿನಗರ, ದಾಸಪ್ಪನಹಳ್ಳಿ, ಸಂಧ್ಯಾನಗರ, ಕುವೆಂಪುನಗರ, ಗಣಪತಿನಗರ, ದ್ವಾರಕಾನಗರ, ಕೆಂಗಲ್ ಹನುಮಂತಯ್ಯನಗರ, ಮುದ್ದಾನಿನಗರ, ಗುಟ್ಟೆ ಬಸವೇಶ್ವರನಗರ, ಶಾಂತಿನಗರ ಸೇರಿದಂತೆ ಸುತ್ತಮತ್ತಲ ಗ್ರಾಮಸ್ಥರು ಜಾತ್ರೆಯಲ್ಲಿ ಭಾಗವಹಿಸಿದ್ದರು.

ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳೆಯರು ರಸ್ತೆಯುದ್ದಕ್ಕೂ ಮನೆಗಳ ಅಂಗಳದಲ್ಲಿ ಬಣ್ಣ ಬಣ್ಣಗಳಿಂದ ರಂಗೋಲಿಯ ಚಿತ್ತಾರ ಬಿಡಿಸಿದ್ದರೆ, ಯುವತಿಯರು ಆರತಿ ಹಿಡಿದು ಮನೆ ಮುಂದೆ ಬಂದ ಮಾರಮ್ಮ ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.