ADVERTISEMENT

ವಿಜ್ಞಾನ-ತಂತ್ರಜ್ಞಾನ ಸಮ್ಮೇಳನಕ್ಕೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:30 IST
Last Updated 18 ಡಿಸೆಂಬರ್ 2012, 19:30 IST

ಬೆಂಗಳೂರು: `ಸಾಮಾಜಿಕ ಪರಿವರ್ತನೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ' ಎಂಬ ವಿಷಯದ ಬಗ್ಗೆ ಇದೇ ಬುಧವಾರ ಮತ್ತು ಗುರುವಾರ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಐದನೇ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಸಮ್ಮೇಳನವು ಇಲ್ಲಿನ ಕುಮಾರಸ್ವಾಮಿ ಬಡಾವಣೆಯ ದಯಾನಂದ ಸಾಗರ ವಿದ್ಯಾಸಂಸ್ಥೆಯ ಡಾ.ಡಿ.ಪ್ರೇಮಚಂದ್ರ ಸಾಗರ್ ಆಡಿಟೋರಿಯಂ ಅಂಡ್ ಸೆಂಟರ್ ಫಾರ್ ಪರ್‌ಫಾರ‌್ಮಿಂಗ್ ಆರ್ಟ್ಸ್‌ನಲ್ಲಿ ಸಂಸ್ಥೆಯ ಸಹಯೋಗದೊಂದಿಗೆ ನಡೆಯಲಿದೆ ಎಂದು ಬಾಹ್ಯಾಕಾಶ ವಿಜ್ಞಾನಿ ಹಾಗೂ ಅಕಾಡೆಮಿ ಅಧ್ಯಕ್ಷರೂ ಆದ ಪ್ರೊ.ಯು.ಆರ್.ರಾವ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎರಡು ದಿನ ನಡೆಯುವ ಸಮ್ಮೇಳನದಲ್ಲಿ ಬಾಹ್ಯಾಕಾಶ ಅನ್ವೇಷಣೆ, ಮಾಹಿತಿ ತಂತ್ರಜ್ಞಾನ, ಔಷಧ ಸಂಶೋಧನೆ, ವನ್ಯಜೀವಿ ಸಂರಕ್ಷಣೆ, ಗ್ರಾಮೀಣ ಆರೋಗ್ಯ ಪಾಲನೆ, ನ್ಯಾನೋ ತಂತ್ರಜ್ಞಾನ, ಜೈವಿಕ ಸಂಪನ್ಮೂಲವಾಗಿ ಸೂಕ್ಷ್ಮಾಣು ಜೀವಿಗಳು ಮತ್ತು ಹಸಿರು ಆರ್ಥಿಕತೆ ಕುರಿತಾಗಿ ತಜ್ಞರು ಉಪನ್ಯಾಸ ನೀಡುವರು ಎಂದು ಅವರು ಮಾಹಿತಿ ನೀಡಿದರು.

ವೈಜ್ಞಾನಿಕ ಸಂಶೋಧನೆಯನ್ನು ಪ್ರೋತ್ಸಾಹಿಸಲು ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ/ ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು/ಪ್ರಾಧ್ಯಾಪಕರು ಮತ್ತು ವಿಜ್ಞಾನಿಗಳಿಗೆ ಪ್ರಾತ್ಯಕ್ಷಿಕೆಗಳನ್ನು ಮಂಡಿಸಲು ಅವಕಾಶ ನೀಡಲಾಗಿದೆ. ಆಯ್ಕೆಯಾಗುವ ಉತ್ತಮ ಪ್ರಾತ್ಯಕ್ಷಿಕೆಗೆ ರೂ.20,000 (ಪ್ರಥಮ), ರೂ.15,000 (ದ್ವಿತೀಯ) ಹಾಗೂ ರೂ.10,000 (ತೃತೀಯ) ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಮ್ಮೇಳನ ಉದ್ಘಾಟಿಸುವರು. ಅತಿಥಿಗಳಾಗಿ ಉಪಮುಖ್ಯಮಂತ್ರಿ ಆರ್. ಅಶೋಕ್, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮೀನುಗಾರಿಕಾ ಸಚಿವ ಆನಂದ್ ವಸಂತ್ ಅಸ್ನೋಟಿಕರ್, ಮಾಜಿ ಸಚಿವ ಡಾ.ಡಿ.ಪ್ರೇಮಚಂದ್ರ ಸಾಗರ್ ಆಗಮಿಸುವರು. ಕಾರ್ಯಕ್ರಮದಲ್ಲಿ ಗುಲ್ಬರ್ಗಾದ ಎಂ.ಆರ್.ಮೆಡಿಕಲ್ ಕಾಲೇಜಿನ ಡಾ.ಪಿ.ಎಸ್.ಶಂಕರ್ ಅವರಿಗೆ `ಜೀವಮಾನ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT