ADVERTISEMENT

ವಿದ್ಯಾರ್ಥಿಗಳು ಪ್ರತಿಭೆಯ ಸದ್ಬಳಕೆ ಮಾಡಿಕೊಳ್ಳಬೇಕು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಯಲಹಂಕ: ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ದೊಡ್ಡ ಕಲಾವಿದರಾಗಿ ಬೆಳೆಯಬೇಕು ಎಂದು ಚಲನಚಿತ್ರ ನಟ ರಘುಮುಖರ್ಜಿ ಹೇಳಿದರು.

ಇಲ್ಲಿನ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕಠಿಣ ಶ್ರಮವಹಿಸಿ ಶೈಕ್ಷಣಿಕ ರಂಗದಲ್ಲಿ ಪ್ರಗತಿ ಸಾಧಿಸಿದರೆ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದು ತಿಳಿಸಿದರು.

ಕಿರುತೆರೆ ನಟಿ ನಂದಿನಿ ಆರ್ಯನ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕಾದರೆ ಪ್ರಯತ್ನ ಅತಿ ಮುಖ್ಯ. ಜೊತೆಗೆ ನಿಮ್ಮ ಸಾಧನೆ ಸಮಾಜಮುಖಿಯಾಗಿರಬೇಕು ಎಂದರು.

ADVERTISEMENT

ಇದೇ ಸಂದರ್ಭದಲ್ಲಿ ಬಿಎ ಪದವಿ ಪರೀಕ್ಷೆಯ ಅರ್ಥಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕಗಳಿಸಿ, ಇಡೀ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿಯೆ ಪ್ರಥಮ  ಸ್ಥಾನಗಳಿಸಿ ಚಿನ್ನದ ಪದಕ ಪಡೆದಿರುವ ವಿದ್ಯಾರ್ಥಿ ಡಿ.ಕೆ.ಜಗದೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ಆರ್.ಪಂಡಿತಾರಾಧ್ಯ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಡಬ್ಲ್ಯೂ.ಎಚ್.ಅನಿಲ್‌ಕುಮಾರ್, ಜಂಟಿ ಕಾರ್ಯದರ್ಶಿ ಎ.ಆರ್.ಶ್ರೀನಿವಾಸಯ್ಯ, ಪ್ರಾಂಶುಪಾಲ ಡಾ.ಎಂ.ಪ್ರಕಾಶ್, ಉಪ ಪ್ರಾಂಶುಪಾಲ ಡಾ. ಎಸ್.ಎನ್.ವೆಂಕಟೇಶ್, ಎಂಬಿಎ ವಿಭಾಗದ ನಿರ್ದೇಶಕ ಡಾ.ಡಿ.ಕೆ.ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಜೆನೆಟಿಕ್ ವಿಷಯದ ಉಪನ್ಯಾಸಕಿ ಸಲ್ಮಾಬಾನು ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕಿ ಎಚ್.ಎನ್. ಮೀರಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.