ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2012ರ ಏಪ್ರಿಲ್‌ನಲ್ಲಿ ಪರೀಕ್ಷೆ ಬರೆದ ಬಿ.ಕಾಂ. ವಿದ್ಯಾರ್ಥಿಯ ಉತ್ತರಪತ್ರಿಕೆಯೇ ಕಣ್ಮರೆಯಾಗಿದೆ. ವಿದ್ಯಾರ್ಥಿ ಸುಮಾರು ಎರಡು ವರ್ಷದಿಂದ 50ಕ್ಕೂ ಅಧಿಕ ಬಾರಿ ವಿವಿಗೆ ಅಲೆದಾಡಿದ ಬಳಿಕ ಇದೀಗ ನ್ಯಾಯ ಸಿಕ್ಕಿದೆ.
ರಾಜಾಜಿನಗರದ ‘ಎಂಇಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’ ಸಂಸ್ಥೆಯ ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ವಿನಯ್ ಎಚ್.ಮುದಕವಿ ಅವರು 2012ರ ಏಪ್ರಿಲ್‌ನಲ್ಲಿ ದ್ವಿತೀಯ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿದ್ದರು. ಏಪ್ರಿಲ್ 21ರಂದು ‘ಬ್ಯುಸಿನೆಸ್ ಸ್ಟ್ಯಾಟಿಸ್ಟಿಕ್ಸ್’ ವಿಷಯದ ಪರೀಕ್ಷೆ ನಡೆದಿತ್ತು. ಜೂನ್ ಏಳರಂದು ಫಲಿತಾಂಶ ಪ್ರಕಟವಾದಾಗ ಅವರಿಗೆ ಆಘಾತ ಕಾದಿತ್ತು. ‘ಬ್ಯುಸಿನೆಸ್ ಸ್ಟ್ಯಾಟಿಸ್ಟಿಕ್ಸ್’ ಪರೀಕ್ಷೆಯಲ್ಲಿ ಗೈರುಹಾಜರಿ ಎಂದು ಪ್ರಕಟವಾಗಿತ್ತು.
ಉಳಿದ ವಿಷಯಗಳಲ್ಲಿ ಅವರಿಗೆ 70ಕ್ಕೂ ಅಧಿಕ ಅಂಕಗಳು ಸಿಕ್ಕಿತ್ತು. ಇದರಿಂದ ಕಂಗಾಲಾದ ಅವರು ಕೂಡಲೇ ಮೌಲ್ಯಮಾಪನ ಕುಲಸಚಿವ ಪ್ರೊ.ಆರ್.ಕೆ.ಸೋಮಶೇಖರ್ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು. ಈ ಲೋಪವನ್ನು ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದ್ದರು. ಆದರೂ, ಸಮಸ್ಯೆ ಬಗೆಹರಿದಿರಲಿಲ್ಲ. ಇದರಿಂದ ಬೇಸತ್ತ ವಿನಯ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
ಅಲ್ಲಿಯೂ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಜ್ಞಾನಭಾರತಿಯಲ್ಲಿರುವ ವಿವಿ ಕ್ಯಾಂಪಸ್‌ಗೆ 50ಕ್ಕೂ ಅಧಿಕ ಬಾರಿ ಅಲೆದಾಡಿ ದೋಷವನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡರು. ಕಾಲೇಜು ಪ್ರಾಂಶುಪಾಲರು ನಾಲ್ಕೈದು ಬಾರಿ ವಿವಿಗೆ ಪತ್ರ ಬರೆದರು. ಈ ನಡುವೆ, ಉತ್ತರಪತ್ರಿಕೆಯೇ ಕಣ್ಮರೆಯಾಗಿರುವುದು ವಿದ್ಯಾರ್ಥಿಯ ಗಮನಕ್ಕೆ ಬಂತು.
ಅನ್ಯ ಮಾರ್ಗ ಕಾಣದೆ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು. ಈ ಬಗ್ಗೆ ತನಿಖೆ ನಡೆಸಲು ಕಳೆದ ಸಿಂಡಿಕೇಟ್ ಸಭೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಪರಿಶೀಲನೆ ನಡೆಸಿ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿರುವುದನ್ನು ಖಚಿತಪಡಿಸಿಕೊಂಡಿತ್ತು. ಸೆಂಟ್ರಲ್ ಕಾಲೇಜಿನಲ್ಲಿ ಗುರುವಾರ ನಡೆದ ಸಿಂಡಿಕೇಟ್ ಸಭೆ ವೇಳೆ ವಿನಯ್ ಮತ್ತೆ ಮನವಿ ಸಲ್ಲಿಸಿದರು. ವಿದ್ಯಾರ್ಥಿಗೆ ಅಂಕ ನೀಡುವುದಾಗಿ ಕುಲಪತಿ ಅವರು ಭರವಸೆ ನೀಡಿದರು.
‘ನಾನು ಮತ್ತೆ ಪರೀಕ್ಷೆ ಬರೆಯಲು ಸಿದ್ಧ ಇದ್ದೇನೆ. 90ಕ್ಕೂ ಅಧಿಕ ಅಂಕ ಗಳಿಸುವ ವಿಶ್ವಾಸ ಇದೆ. ವಿವಿ ಕಡೆಯಿಂದ ತಪ್ಪು ಆಗಿರುವ ಕಾರಣ ಅಂಕ ಪಟ್ಟಿಯಲ್ಲಿ ಪುನರಾವರ್ತಿತ ವಿದ್ಯಾರ್ಥಿ ಎಂಬುದಾಗಿ ನಮೂದಿಸಬಾರದು’ ಎಂದು ವಿನಯ್ ತಿಳಿಸಿದರು.
‘ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ’
ಫಲಿತಾಂಶ ಪ್ರಕಟಗೊಂಡ ಆರು ತಿಂಗಳ ಬಳಿಕ ಉತ್ತರಪತ್ರಿಕೆಯನ್ನು ಇಟ್ಟುಕೊಳ್ಳುವ ಪರಿಪಾಠ ವಿವಿಯಲ್ಲಿ ಇಲ್ಲ. ಈ ಘಟನೆ ನಡೆದು ಎರಡು ವರ್ಷಗಳು ಕಳೆದಿವೆ. ಹೀಗಾಗಿ ಈಗ ಉತ್ತರಪತ್ರಿಕೆ ಸಿಗುವುದಿಲ್ಲ. ಉತ್ತರಪತ್ರಿಕೆ ಕಣ್ಮರೆಯಾಗಿರುವ ಶಂಕೆ ಇದೆ.
ವಿವಿ ಕಡೆಯಿಂದ ಲೋಪ ಆಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಉಳಿದ ವಿಷಯಗಳಲ್ಲಿ ಪಡೆದ ಅಂಕದಷ್ಟೇ ಅಂಕವನ್ನು ಈ ವಿಷಯಕ್ಕೆ ನೀಡಲಾಗುವುದು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಪ್ರೊ.ಬಿ. ತಿಮ್ಮೇಗೌಡ, ಕುಲಪತಿ, ಬೆಂಗಳೂರು ವಿವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.