ಬೆಂಗಳೂರು: `ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯು ಪ್ರಗತಿಯಲ್ಲಿದ್ದು ಮುಂಬರುವ ವರ್ಷಗಳಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲಾಗುವುದು~ ಎಂದು ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿ ಎಂಜಿನಿಯರುಗಳ ಸಂಘದ ಅಧ್ಯಕ್ಷ ಎಲ್.ರವಿ ಇಲ್ಲಿ ತಿಳಿಸಿದರು.
ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿ ಎಂಜಿನಿಯರ್‌ಗಳ ಸಂಘವು ಬುಧವಾರ ಹಮ್ಮಿಕೊಂಡಿದ್ದ 48ನೇ ಸರ್ವ ಸದಸ್ಯರ ಮಹಾಧಿವೇಶನದಲ್ಲಿ ಮಾತನಾಡಿದರು.
`2008 ರಲ್ಲಿ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಅಧಿಕವಾಗಿತ್ತು. ನಂತರದ ವರ್ಷಗಳಲ್ಲಿ ಹಲವಾರು ವಿದ್ಯುತ್ ಸರಬರಾಜು ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಪೂರೈಕೆಯಲ್ಲಿ ಪ್ರಗತಿಯಾಗಿದೆ~ ಎಂದು ಹೇಳಿದರು.
`ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಇಲಾಖೆಯು ಸಿದ್ದವಾಗಿದೆ. ಗುಣಮಟ್ಟದ ವಿದ್ಯುತ್ ಪೂರೈಸುವ ದೃಷ್ಟಿಯಿಂದ ಇಲಾಖೆಯು ಕಾರ್ಯೋನ್ಮುಖವಾಗಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಂದ ಹೆಚ್ಚಿನ ದೂರುಗಳು ಬರದಂತೆ ಇಲಾಖೆಯು ಉತ್ತಮ ಸೇವೆ ನೀಡುತ್ತಿದೆ~ ಎಂದು ಪ್ರಶಂಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ರವಿಕುಮಾರ್ ಮಾತನಾಡಿ, `ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಕೇವಲ ಒಂದೇ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವುದರಿಂದ ಅಧಿಕಾರಿಗಳಿಗೆ ರಾಜ್ಯದ ವಿವಿಧ ಭಾಗಗಳಲ್ಲಿನ ಸಮಸ್ಯೆಗಳು ಅರ್ಥವಾಗುವುದಿಲ್ಲ. ಈ ದೃಷ್ಟಿಯಿಂದ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಪಾರದರ್ಶಕ ವರ್ಗಾವಣಾ ನೀತಿ ಅಗತ್ಯವಿದೆ~ ಎಂದು ಅಭಿಪ್ರಾಯಪಟ್ಟರು.
`ಬಹುತೇಕ ಅಧಿಕಾರಿಗಳು ಬೆಂಗಳೂರು ಹಾಗೂ ಇತರೆ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಉತ್ಸುಕರಾಗಿರುತ್ತಾರೆ.
ಗುಲ್ಬರ್ಗ, ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಇತರೆ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ನಿರಾಶಕ್ತಿ ತೋರುತ್ತಾರೆ. ಅಧಿಕಾರಿಗಳು ಯಾವುದೇ ಪ್ರದೇಶಗಳಿಗೆ ವರ್ಗಾವಣೆಯಾದರೂ ಗುಣಮಟ್ಟದ ಕಾರ್ಯ ನಿರ್ವಹಿಸುವ ಮನೋವೃತ್ತಿ ಬೆಳೆಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ಮಣಿವಣ್ಣನ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿರ್ದೇಶಕ ಎಸ್.ಪ್ರತಾಪ್‌ಕುಮಾರ್, ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಸ್.ವಿಜಯನರಸಿಂಹ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ವಿ.ಯಶವಂತ್, ಸಂಘದ ಪ್ರಧಾನ ಕಾರ್ಯದರ್ಶಿ ವಿ.ವೆಂಕಟಶಿವಾರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.