ADVERTISEMENT

ವಿದ್ಯುತ್ ದರ ಏರಿಕೆ: ಹೊರೆಯಾಗದಂಥ ಕ್ರಮ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:25 IST
Last Updated 19 ಸೆಪ್ಟೆಂಬರ್ 2011, 19:25 IST

ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯೂ ಸೇರಿದಂತೆ ವಿವಿಧ ಕಾರಣಗಳಿಂದ ವಿದ್ಯುತ್ ದರ ಹೆಚ್ಚಳ ಅನಿವಾರ್ಯವಾಗಿದೆ. ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, `ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆ ಆಧಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಕೆ ಮಾಡಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಯೋಚಿಸಿತ್ತು. ಆದರೆ ಜನತೆಗೆ ಹೊರೆ ಆಗಬಾರದು ಎಂಬ ಕಾರಣದಿಂದ ಇಂಧನ ಇಲಾಖೆ ನಿರ್ಧಾರ ಕೈಗೊಂಡಿದೆ~ ಎಂದರು. ಹಾಸನ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ ಕಡತಗಳು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿ ತಲುಪಿವೆ. ಕಡತಗಳನ್ನು ಪರಿಶೀಲಿಸಿ ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತೆರಿಗೆ ರದ್ಧತಿಗೆ ಕ್ರಮ: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್‌ಕುಮಾರ್ ಪಾಟೀಲ್ ನೇತೃತ್ವದ ನಿಯೋಗ ಸದಾನಂದಗೌಡ ಅವರನ್ನು ಭೇಟಿಮಾಡಿ ಕನ್ನಡ ಚಲನಚಿತ್ರಗಳ ಪ್ರದರ್ಶನ ತೆರಿಗೆ ರದ್ದು ಮಾಡುವಂತೆ ಮನವಿ ಸಲ್ಲಿಸಿತು. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಟೆಲಿವಿಷನ್ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್‌ನ ಕಾರ್ಯದರ್ಶಿ ರವಿಕಿರಣ್ ನೇತೃತ್ವದ ನಿಯೋಗದಿಂದ ಮನವಿ ಸ್ವೀಕರಿಸಿ, ಕ್ಲಬ್‌ನ ಕಟ್ಟಡ ನಿರ್ಮಾಣಕ್ಕೆ ರೂ. ಒಂದು ಕೋಟಿ ಅನುದಾನ ನೀಡುವುದಾಗಿ ಪ್ರಕಟಿಸಿದರು.

ಸ್ವಾತಂತ್ರ್ಯ ಯೋಧರ ಭೇಟಿ: ಗೋವಾ ಸ್ವಾತಂತ್ರ್ಯ ಯೋಧರ ಸಂಘದ ಸದಸ್ಯರು ಸೋಮವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು. ಸರ್ಕಾರ ಹೈದರಾಬಾದ್ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗೋವಾ ಸ್ವಾತಂತ್ರ್ಯ ಹೋರಾಟಗಾರರ ನಡುವೆ ತಾರತಮ್ಯ ಧೋರಣೆಯನ್ನು ನಿಲ್ಲಿಸಬೇಕು ಎಂದು ಸಂಘದ ಅಧ್ಯಕ್ಷ ಗೋವಿಂದರಾಜು ಒತ್ತಾಯಿಸಿದರು.

ಪಾರ್ಕಿಂಗ್ ಶುಲ್ಕ ಪ್ರಸ್ತಾವ ಮುಂದೂಡಿಕೆ
ಬೆಂಗಳೂರು: ಮನೆಯ ಆವರಣದಲ್ಲಿ ಪಾರ್ಕಿಂಗ್ ಸೌಲಭ್ಯವಿಲ್ಲದೆ ರಾತ್ರಿ ವೇಳೆ ತಮ್ಮ ಕಾರುಗಳನ್ನು ರಸ್ತೆ ಮೇಲೆ ನಿಲುಗಡೆ ಮಾಡುವ ಮಾಲೀಕರಿಂದ ಶುಲ್ಕ ವಸೂಲಿ ಮಾಡುವ ನಗರ ಉಸ್ತುವಾರಿ ಸಚಿವ ಆರ್. ಅಶೋಕ ಅವರ ಚಿಂತನೆಗೆ ಸಾರ್ವಜನಿರು ವಿರೋಧಿಸಿರುವ ಹಿನ್ನೆಲೆಯಲ್ಲಿ ಪ್ರಸ್ತಾವವನ್ನು ಮುಂದೂಡಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.