ADVERTISEMENT

ವಿಪ್ರೊ ಆವರಣದಲ್ಲಿ ಬಾಂಬ್: ಬೆದರಿಕೆ ಪತ್ರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:33 IST
Last Updated 19 ಜುಲೈ 2013, 19:33 IST

ಬೆಂಗಳೂರು: ನಗರದ ದೊಡ್ಡಕನ್ನಳ್ಳಿ ಬಳಿ ಇರುವ ವಿಪ್ರೊ ಸಾಫ್ಟ್‌ವೇರ್ ಕಂಪೆನಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಸರ್ಜಾಪುರ ಪೊಲೀಸ್ ಠಾಣೆಗೆ ಶುಕ್ರವಾರ ಬೆದರಿಕೆ ಪತ್ರವೊಂದು ಬಂದಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

`ವಿಪ್ರೊ ಆವರಣದ ತರಬೇತಿ ವಿಭಾಗ (ಟ್ರೈನಿಂಗ್ ಬ್ಲಾಕ್) ಮತ್ತು ಕಾರ್ಪೊರೇಟ್ ಬ್ಲಾಕ್‌ನಲ್ಲಿ 19 ಬಾಂಬ್‌ಗಳನ್ನು ಇಟ್ಟಿದ್ದೇವೆ. ಆ ಬಾಂಬ್‌ಗಳು ಕ್ರಮವಾಗಿ ಶುಕ್ರವಾರ ಮಧ್ಯಾಹ್ನ 11 ಗಂಟೆಗೆ ಮತ್ತು ಶನಿವಾರ ಮಧ್ಯಾಹ್ನ 1 ಗಂಟೆಗೆ ಸ್ಫೋಟಗೊಳ್ಳಲಿವೆ' ಎಂದು ಆ ಪತ್ರದಲ್ಲಿ ಬರೆಯಲಾಗಿತ್ತು. ಪತ್ರದ ಕೊನೆಯಲ್ಲಿ `ಜಿಹಾದ್' ಎಂದು ಬರೆಯಲಾಗಿತ್ತು.

ಆ ಪತ್ರ ಮಧ್ಯಾಹ್ನ 1.30ರ ಸುಮಾರಿಗೆ ಸರ್ಜಾಪುರ ಠಾಣೆಗೆ ಬಂದಿದೆ. ಆದರೆ, ವಿಪ್ರೊ ಕಂಪೆನಿಯು ಎಚ್‌ಎಸ್‌ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿರುವುದರಿಂದ ಅಲ್ಲಿನ ಸಿಬ್ಬಂದಿಗೆ ಸರ್ಜಾಪುರ ಪೊಲೀಸರು ಕರೆ ಮಾಡಿ ಪತ್ರದ ವಿಷಯ ತಿಳಿಸಿದ್ದಾರೆ. ನಂತರ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸಿಬ್ಬಂದಿಯೊಂದಿಗೆ ಕೂಡಲೇ ವಿಪ್ರೊ ಕಂಪೆನಿಗೆ ತೆರಳಿ ತಪಸಾಣೆ ಮಾಡಿದರು. ಸಂಸ್ಥೆಯ ಪ್ರವೇಶದ್ವಾರಗಳು, ತರಬೇತಿ ವಿಭಾಗ, ಕಾರ್ಪೊರೇಟ್ ಬ್ಲಾಕ್ ಸೇರಿದಂತೆ ಹಲವೆಡೆ ಒಂದು ತಾಸಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರೂ ಎಲ್ಲಿಯೂ ಬಾಂಬ್ ಪತ್ತೆಯಾಗಲಿಲ್ಲ.

`ಅರ್ಧ ಪುಟದಷ್ಟಿರುವ ಆ ಪತ್ರದಲ್ಲಿ ಐದು ವಾಕ್ಯಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. ಆ ಪತ್ರ ಬರೆದ ವ್ಯಕ್ತಿ ತನ್ನ ವಿಳಾಸವನ್ನು ನಮೂದಿಸಿಲ್ಲ. ಅಲ್ಲದೇ, ಆ ಪತ್ರ ಯಾವ ಅಂಚೆ ಕಚೇರಿಯಿಂದ ರವಾನೆಯಾಗಿದೆ ಎಂಬ ಬಗ್ಗೆ ಸೀಲ್ ಸಹ ಹಾಕಿಲ್ಲ. ಇದರಿಂದಾಗಿ ಆ ಪತ್ರ ಯಾವ ಸ್ಥಳದಿಂದ ಬಂದಿದೆ ಎಂಬುದು ಗೊತ್ತಾಗಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸ್ಥೆಯ ತರಬೇತಿ ವಿಭಾಗ ಮತ್ತು ಕಾರ್ಪೊರೇಟ್ ಬ್ಲಾಕ್‌ನಲ್ಲೇ ಬಾಂಬ್ ಇಟ್ಟಿರುವುದಾಗಿ ಪತ್ರ ಬರೆದಿರುವ ಸಂಗತಿ ಗಮನಿಸಿದರೆ ಕಂಪೆನಿಯ ಒಳಗಿರುವ ವ್ಯಕ್ತಿಗಳೇ ಈ ಕೃತ್ಯ ಎಸಗಿರಬಹುದೆಂಬ ಶಂಕೆ ಮೂಡುತ್ತದೆ. ಏಕೆಂದರೆ ಸಂಸ್ಥೆಯ ಹೊರಗಿನ ವ್ಯಕ್ತಿಗಳಿಗೆ ಕಂಪೆನಿಯ ತರಬೇತಿ ವಿಭಾಗ ಮತ್ತು ಕಾರ್ಪೊರೇಟ್ ಬ್ಲಾಕ್‌ನ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.