ADVERTISEMENT

ವಿಮಾನ ನಿಲ್ದಾಣಕ್ಕೆ ವೋಲ್ವೊ ವಾಯುವಜ್ರ ಸೇವೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 20:09 IST
Last Updated 20 ಜುಲೈ 2013, 20:09 IST

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಯಶವಂತಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೂತನ ವೋಲ್ವೊ ವಾಯುವಜ್ರ (ಹವಾನಿಯಂತ್ರಿತ) ಬಸ್‌ಗಳ ಸೇವೆಯನ್ನು ಶನಿವಾರದಿಂದ ಆರಂಭಿಸಿದೆ.

ಬ್ರಿಗೇಡ್ ಗೇಟ್ ವೇ ಯಿಂದ ರಾಜಾಜಿನಗರ ಮೊದಲ ಹಂತ, ಇಸ್ಕಾನ್ ದೇವಾಲಯ, ಯಶವಂತಪುರ ಟಿಟಿಎಂಸಿ, ಎಂ.ಎಸ್.ರಾಮಯ್ಯ ಆಸ್ಪತ್ರೆ, ಚಿಕ್ಕಮಾರನಹಳ್ಳಿ, ಬಿಇಎಲ್ ವೃತ್ತ, ವಿದ್ಯಾರಣ್ಯಪುರ, ಜೆಲ್ಲಿ ಮಿಷನ್, ಮದರ್ ಡೇರಿ, ಯಲಹಂಕ ಉಪನಗರ ಮತ್ತು ಕೋಗಿಲು ಅಡ್ಡರಸ್ತೆ ಮಾರ್ಗವಾಗಿ ವಾಯುವಜ್ರ ಬಸ್‌ಗಳು ವಿಮಾನ ನಿಲ್ದಾಣಕ್ಕೆ ಸಂಚರಿಸಲಿವೆ. ಒಟ್ಟು 4 ಬಸ್‌ಗಳು 30 ಬಾರಿ ಸಂಚರಿಸಲಿವೆ.

ಒಟ್ಟು 43.4 ಕಿ.ಮೀ ಉದ್ದವಾಗಿದ್ದು, ಬ್ರಿಗೇಡ್ ಗೇಟ್ ವೇ ನಿಂದ ವಿಮಾನ ನಿಲ್ದಾಣಕ್ಕೆ ರೂ200 ನಿಗದಿಪಡಿಸಲಾಗಿದೆ.
ಬಸ್ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, `ಬಿಎಂಟಿಸಿಗೆ ಅಗತ್ಯವಿರುವ ವಿವಿಧ ವರ್ಗದ 4,000 ಸಿಬ್ಬಂದಿಯನ್ನು ಶೀಘ್ರದಲ್ಲೇ ನೇಮಿಸಿಕೊಳ್ಳಲಾಗುವುದು. ಈಗಾಗಲೇ 1,500 ಚಾಲಕ (ದರ್ಜೆ-3) ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ' ಎಂದು ತಿಳಿಸಿದರು.

`ಈ ವರ್ಷ ಬಿಎಂಟಿಸಿಗೆ 1,139 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. `ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ'  ಅನ್ನು ಅಳವಡಿಸಿ, ಪ್ರಯಾಣಿಕರಿಗೆ ಮಾಹಿತಿ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಕುರುಬರಹಳ್ಳಿ, ಮಂಡೂರು, ಸಾದರಮಂಗಳ, ನಾಗದಾಸನಹಳ್ಳಿ, ದೇವನಹಳ್ಳಿ, ಸಾತನೂರು, ಮತ್ತಹಳ್ಳಿ, ಸಾದೇನಹಳ್ಳಿ ಮತ್ತು ಅಂಜನಾಪುರಗಳಲ್ಲು ನೂತನ ಬಸ್ ಘಟಕಗಳ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುವುದು' ಎಂದು ಹೇಳಿದರು.

`ನಗರದ ಆರು ಸ್ಥಳಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಟಿಟಿಎಂಸಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಹೆಬ್ಬಾಳ, ಜಯನಗರ 4ನೇ ಹಂತ, ಯಲಹಂಕ (ಪುಟ್ಟೇನಹಳ್ಳಿ), ಎಲೆಕ್ಟ್ರಾನಿಕ್‌ಸಿಟಿ, ಚಿಕ್ಕಬೆಟ್ಟಹಳ್ಳಿ (ಎಂ.ಎಸ್.ಪಾಳ್ಯ) ಹಾಗೂ ಕತ್ತರಿಗುಪ್ಪೆಯಲ್ಲಿ ಟಿಟಿಎಂಸಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT