ADVERTISEMENT

ವಿಮಾನ ನಿಲ್ದಾ ಣ ರಸ್ತೆ : ಮಾಸಾಂತ್ಯ ಕ್ಕೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 20:19 IST
Last Updated 2 ಜನವರಿ 2014, 20:19 IST

ಬೆಂಗಳೂರು: ಹೆಬ್ಬಾಳ ಮತ್ತು ಕೆಂಪೇಗೌಡ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗ ಮಧ್ಯೆ ನಡೆಯುತ್ತಿರುವ ಎತ್ತರಿಸಿದ ಮಾರ್ಗಗಳ ಕಾಮಗಾರಿ ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗುರುವಾರ ಎತ್ತರಿಸಿದ ಮಾರ್ಗಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

೨೨ ಕಿ.ಮೀ. ಉದ್ದದ ಈ ‘ಸಿಗ್ನಲ್ ಮುಕ್ತ’ ರಸ್ತೆ ಜನವರಿ ಅಂತ್ಯಕ್ಕೆ ಸೇವೆಗೆ ಮುಕ್ತವಾಗಲಿದೆ. ಈ ಸಂಬಂಧ ಕೇಂದ್ರ ಸಾರಿಗೆ ಸಚಿವ ಆಸ್ಕರ್ ಫರ್ನಾಂಡೀಸ್ ಅವರೊಂದಿಗೆ ಚರ್ಚಿಸಿ, ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾ­ಗುವುದು ಎಂದು ತಿಳಿಸಿದರು. 

ಈ ‘ಸಿಗ್ನಲ್‌ ಮುಕ್ತ’ ರಸ್ತೆ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಸಂಚಾರಿ ದಟ್ಟಣೆ ಸಮಸ್ಯೆ ಎದುರಾಗುವುದಿಲ್ಲ. ಇದರಿಂದ ನಿರಾತಂಕವಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿ­ಸಬಹುದು ಎಂದರು. 

ಆರು ಎತ್ತರಿಸಿದ ಮಾರ್ಗಗಳ ಪೈಕಿ ಚಿಕ್ಕಜಾಲ ಹಾಗೂ ಹುಣಸಮಾರನಹಳ್ಳಿ ಬಳಿ ಇರುವ ರಸ್ತೆ­ಗಳು ಬಹುತೇಕ ಪೂರ್ಣಗೊಂಡಿದ್ದು, ವಿದ್ಯಾನ­ಗರ ಮತ್ತು ಬಾಗಲೂರು ಬಳಿ ಇರುವ ರಸ್ತೆಗಳ ಕಾಮಗಾರಿ ಇನ್ನು ೧೫ ದಿನಗಳಲ್ಲಿ ಪೂರ್ಣಗೊ­ಳ್ಳಲಿವೆ. ಉಳಿದ ಎರಡು ರಸ್ತೆಗಳು ಸಹ ಮುಂದಿನ ವಾರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ವಿವರಿಸಿದರು. 

ಜಕ್ಕೂರು, ಯಲಹಂಕ ಸೇರಿದಂತೆ ಕೆಲವು ರಸ್ತೆಗಳಲ್ಲಿ ತೊಡಕುಗಳಿದ್ದು, ಅದರ ನಿವಾರಣೆಗೆ ಜಾಗದ ಅವಶ್ಯಕತೆ ಇದೆ. ಯಲಹಂಕದ ಬಳಿ ಭಾರತೀಯ ವೈಮಾನಿಕ ದಳಕ್ಕೆ ಸೇರಿದ ಸ್ಥಳ­ಗಳಲ್ಲಿ ರಸ್ತೆ ನಿರ್ಮಾಣಕ್ಕೆ ರಕ್ಷಣಾ ಇಲಾಖೆ ಒಪ್ಪುತ್ತಿಲ್ಲ. ಆದ್ದರಿಂದ ಈ ಸಂಬಂಧ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರೊಂದಿಗೆ ಚರ್ಚಿ­ಸುವುದಾಗಿ ಅವರು ತಿಳಿಸಿದರು.

ಅಷ್ಟೆ ಅಲ್ಲದೆ ಏಳೆಂಟು ಕಡೆಗಳಲ್ಲಿ ಖಾಸಗಿ­ಯವರ ಜಮೀನು ಇದ್ದು, ಬ್ಯಾಟರಾಯ­ನಪುರದಲ್ಲಿ ದೇವಾಲಯ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ. ಈ ಸಂಬಂಧ ಪರಿಹಾರ ನೀಡಲು ಮುಂದಾದರೂ, ಸ್ಥಳೀಯರು ಒಪ್ಪು­ತ್ತಿಲ್ಲ. ಈ ಕುರಿತು ಸ್ಥಳೀಯರೊಂದಿಗೆ ಚರ್ಚಿಸಿ, ಮನವೊಲಿಸುವ ಪ್ರಯತ್ನ ಮುಂದುವರೆದಿದೆ ಎಂದರು.

‘ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌) ಬಳಿಯ ಡಾ.ಸಿ.ಎನ್.ಆರ್.ರಾವ್ ‘ಅಂಡರ್‌­ಪಾಸ್’ ರಸ್ತೆ ನಿರ್ಮಾಣ ಕಾರ್ಯವು ನಾನು ಭೇಟಿ ನೀಡಿದ ನಂತರ ತ್ವರಿತಗತಿಯಲ್ಲಿ ಸಾಗಿದ್ದು, ಮುಂದಿನ ತಿಂಗಳಲ್ಲಿ ಪೂರ್ಣ­ಗೊಳ್ಳಲಿದೆ’ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸರ್ಕಾರ ರಚನೆಯಾದ ಬಳಿಕ ನಗರದಲ್ಲಿ ಒಟ್ಟು ೨೪೦ ಮುಖ್ಯ ರಸ್ತೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ಬರುವ ಏಪ್ರಿಲ್‌ ಮತ್ತು ಮೇ ಒಳಗಾಗಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಅಂದಾಜು ೫೭೦ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ 22 ರಸ್ತೆಗಳ ಕಾಮಗಾರಿ ಪ್ರಾರಂಭವಾಗಿದೆ. ಈ ಕಾಮಗಾರಿಯನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸ­ಲಾ­ಗುವುದು. ಇದಕ್ಕೂ ಮೊದಲು ಕೈಗೆತ್ತಿಕೊಂಡಿದ್ದ ೨೬ ರಸ್ತೆಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ ಎಂದು ವಿವರಿಸಿದರು.

ಎತ್ತರಿಸಿದ ರಸ್ತೆಗಳ ಪ್ರಗತಿ ಪರಿಶೀಲನೆ ವೇಳೆ ಸಚಿವರಾದ ಕೃಷ್ಣಬೈರೇಗೌಡ, ಎಚ್‌.ಸಿ.­ಮಹದೇವಪ್ಪ, ಪಾಲಿಕೆ, ಮೆಟ್ರೊ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಬಿಡಿಎ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯರಿಗೆ ಟೋಲ್‌ನಿಂದ ವಿನಾಯಿತಿ
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗುತ್ತಿರುವ ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ಟೋಲ್‌ನಿಂದ ವಿನಾಯಿತಿ ಸಿಗುವಂತೆ ಪ್ರಯತ್ನಿಸಲಾಗುವುದು. ಟೋಲ್‌ ರಸ್ತೆಯನ್ನು ಬಳಸಿ ವಿಮಾನ ನಿಲ್ದಾಣ ಹಾಗೂ ಬೇರೆ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಮಾತ್ರ ಟೋಲ್ ವಿಧಿಸುವುದು ನ್ಯಾಯ.

ಆದರೆ, ಸ್ಥಳೀಯರು ಹಾಗೂ ಅಕ್ಕ ಪಕ್ಕದ ಹಳ್ಳಿಗಳ ಜನರಿಗೂ ಟೋಲ್‌ ವಿಧಿಸುವ ಕ್ರಮ ಸರಿಯಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಟೋಲ್‌ನಿಂದ ವಿನಾಯಿತಿ ನೀಡುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುತ್ತೇನೆ. ಅಷ್ಟೇ ಅಲ್ಲದೆ, ಕೇಂದ್ರ ಸಾರಿಗೆ ಸಚಿವ ಆಸ್ಕರ್ ಫರ್ನಾಂಡೀಸ್ ಅವರೊಂದಿಗೂ ಚರ್ಚಿಸುತ್ತೇನೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.