ADVERTISEMENT

ವಿಮಾನ ಸಂತೆಯಲ್ಲಿ ಬಂದಿಳಿದ ಪ್ಯಾರಾಚೂಟ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2013, 20:03 IST
Last Updated 10 ಫೆಬ್ರುವರಿ 2013, 20:03 IST
ಯಲಹಂಕದ ವಾಯುನೆಲೆಯಲ್ಲಿ ಪಂಚ ದಿನಗಳ `ವಿಮಾನಜಾತ್ರೆ'ಯಲ್ಲಿ ವಿದಾಯದ ನಗು ಬೀರಿದ `ಸಾರಂಗ' ತಂಡ. ಈ ಅಪೂರ್ವ ಪ್ರದರ್ಶನಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿದ್ದರು	-ಪ್ರಜಾವಾಣಿ ಚಿತ್ರ/ಆನಂದ ಬಕ್ಷಿ
ಯಲಹಂಕದ ವಾಯುನೆಲೆಯಲ್ಲಿ ಪಂಚ ದಿನಗಳ `ವಿಮಾನಜಾತ್ರೆ'ಯಲ್ಲಿ ವಿದಾಯದ ನಗು ಬೀರಿದ `ಸಾರಂಗ' ತಂಡ. ಈ ಅಪೂರ್ವ ಪ್ರದರ್ಶನಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿದ್ದರು -ಪ್ರಜಾವಾಣಿ ಚಿತ್ರ/ಆನಂದ ಬಕ್ಷಿ   

ಬೆಂಗಳೂರು: ಯುದ್ಧ, ವಿಪತ್ತು ಹಾಗೂ ತುರ್ತು ಸಂದರ್ಭಗಳಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್ ಸಿಬ್ಬಂದಿಯ `ಆಪ್ತರಕ್ಷಕ' ಪ್ಯಾರಾಚೂಟ್. ಈ ಪ್ಯಾರಾಚೂಟ್ ಸಹಸ್ರಾರು ಮಂದಿಯ ಪ್ರಾಣ ರಕ್ಷಣೆ ಮಾಡಿದೆ. ಭಾರತೀಯ ರಕ್ಷಣಾ ಇಲಾಖೆಗೆ ಪೂರೈಕೆಯಾಗುವ ಪ್ಯಾರಾಚೂಟ್ ಎಲ್ಲಿ ತಯಾರಾಗುತ್ತದೆ ಎಂಬ ಕುತೂಹಲ ಸಹಜ.

ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ  `ವಿಮಾನ ಜಾತ್ರೆ'ಯಲ್ಲಿ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದಾಗ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಆರ್ಡಿನೆನ್ಸ್ ಪ್ಯಾರಾಚೂಟ್ ಫ್ಯಾಕ್ಟರಿ (ಒಪಿಎಫ್)ಯ ಮಳಿಗೆಯು ಈ ಸಂತೆಯಲ್ಲಿದೆ. ಇಲ್ಲಿ ವಿವಿಧ ಮಾದರಿಯ ಪ್ಯಾರಾಚೂಟ್‌ಗಳ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ.

ರಕ್ಷಣಾ ಇಲಾಖೆಯ ಅಧೀನದಲ್ಲಿ ಈ ಕಂಪೆನಿ ಕಾರ್ಯನಿರ್ವಹಿಸುತ್ತಿದೆ. ಕಂಪೆನಿಯ ಕೇಂದ್ರ ಕಚೇರಿ ಕೋಲ್ಕತ್ತದಲ್ಲಿದ್ದು, ದೇಶದ 24 ನಗರಗಳಲ್ಲಿ ಕಂಪೆನಿಯ 40 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಪ್ಯಾರಾಚೂಟ್ ಕಾರ್ಖಾನೆ ಕಾನ್ಪುರದಲ್ಲಿದೆ.  ಸೇನೆಗೆ ಪ್ಯಾರಾಚೂಟ್‌ಗಳನ್ನು ಪೂರೈಕೆ ಮಾಡುವ ದೇಶದ ಏಕೈಕ ಕಾರ್ಖಾನೆಯೂ ಹೌದು.

ಈ ಕಂಪೆನಿ ಪ್ಯಾರಾಚೂಟ್ ಮಾತ್ರವಲ್ಲದೆ ಸೇನೆಗೆ ಬೇಕಾಗುವ ಗನ್ ಸೇರಿದಂತೆ ಹಲವು ಬಗೆಯ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ. ಈ ಕಾರ್ಖಾನೆಯ ವಿಶೇಷವೆಂದರೆ ದೇಸಿ ತಂತ್ರಜ್ಞಾನ ಹಾಗೂ ಉತ್ಪನ್ನಗಳನ್ನೇ ಬಳಸಿ ಪ್ಯಾರಾಚೂಟ್ ತಯಾರಿಸುತ್ತಿದೆ.

`ಭಾರತೀಯ ಸೇನೆಯ ಮಿಗ್-21, ಮಿಗ್-23, ಮಿಗ್-25, ಮಿಗ್- 29, ಮಿರೇಜ್, ಜಾಗ್ವರ್ ಸೇರಿದಂತೆ ಪ್ರಮುಖ ಯುದ್ಧ ವಿಮಾನಗಳಲ್ಲಿ ಕಾಣಿಸುವುದು ಈ ಕಾರ್ಖಾನೆಯ ಪ್ಯಾರಾಚೂಟ್‌ಗಳು. ಇಂಡೊನೇಷ್ಯಾ, ಓಮನ್ ಮತ್ತಿತರ ರಾಷ್ಟ್ರಗಳಿಗೆ ಸುಖೋಯ್, ಮಿಗ್ ವಿಮಾನದ ಪ್ಯಾರಾಚೂಟ್‌ಗಳನ್ನು ಪೂರೈಕೆ ಮಾಡಲಾಗಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು `ಪ್ರಜಾವಾಣಿ'ಗೆ ಶುಕ್ರವಾರ ಮಾಹಿತಿ ನೀಡಿದರು.

`ಪ್ಯಾರಾಚೂಟ್‌ಗೆ ತಯಾರಿಸುವುದು ಕ್ಲಿಷ್ಟಕರ ಪ್ರಕ್ರಿಯೆ. ವಿಶೇಷ ಯಂತ್ರದ ನೆರವಿನಿಂದ ನೈಲಾನ್ ಬಟ್ಟೆ ಬಳಸಿ ಇದನ್ನು ತಯಾರಿಸಲಾಗುತ್ತದೆ. ಸೇನೆಗೆ ಪೂರೈಸುವ ಪ್ಯಾರಾಚೂಟ್‌ಗಳನ್ನು 40-45 ಬಾರಿ ಬಳಸಬಹುದು. ಇದರ ಬೆಲೆ  ್ಙ 70,000-್ಙ 1 ಲಕ್ಷದ ಆಜುಬಾಜು. ಕಾರ್ಖಾನೆ ತಯಾರಿಸುವ ಪ್ಯಾರಾಸೈಲರ್‌ಗಳು ಬಿಟ್ಟು ಉಳಿದೆಲ್ಲ ಪ್ಯಾರಾಚೂಟ್‌ಗಳನ್ನು ಸೇನೆಗೆ ನೀಡಲಾಗುತ್ತಿದೆ' ಎಂದು ಅವರು ತಿಳಿಸಿದರು. 

ಅತ್ಯಾಧುನಿಕ ಶಸ್ತ್ರಾಸ್ತ್ರ ಸಾಧನಗಳನ್ನು ಪೂರೈಕೆ ಮಾಡುವ ಮೂಲಕ ಭಾರತೀಯ ಸೇನೆಗೆ ಸದೃಢಗೊಳಿಸುವುದು ಕಂಪೆನಿಯ ಗುರಿ. ಈ ದಿಸೆಯಲ್ಲಿ ಈವರೆಗೆ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗಿದೆ. ಹೊಸ ಶೋಧ ಏನಿದ್ದರೂ ಭಾರತೀಯ ಸೇನೆಗೆ ಮೀಸಲು ಎಂಬುದು ಅವರ ಸ್ಪಷ್ಟ ನುಡಿ.

ಬ್ರಿಟಿಷರ ಕಾಲದಲ್ಲಿ ಭಾರತೀಯ ಆರ್ಡಿನೆನ್ಸ್ ಕಂಪೆನಿ ಆರಂಭಗೊಂಡಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರಕುವ ಕಾಲದಲ್ಲಿ 18 ಕಾರ್ಖಾನೆಗಳು ಇದ್ದವು. ಬಳಿಕ 22 ಫ್ಯಾಕ್ಟರಿಗಳು ಶುರುವಾದವು ಎಂದು ಅವರು ತಿಳಿಸಿದರು.

`ಸಂತೆ'ಯಲ್ಲಿ ಕೇಳಿ ಬಂದದ್ದು...

ಜೆಕ್ ಗಣರಾಜ್ಯದ ಫ್ಲೈಯಿಂಗ್ ಬುಲ್ಸ್, ರಷ್ಯನ್ ನೈಟ್ಸ್ ತಂಡಗಳು ಅದ್ಭುತ ಪ್ರದರ್ಶನ ನೀಡಿದವು. ಪ್ರದರ್ಶನ ತುಂಬಾ ಇಷ್ಟವಾಯಿತು. ಇಂತಹ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದು. ನೀರಿನ ಹಾಗೂ ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ ಇದ್ದುದು ಏಕೈಕ ಲೋಪ.
-ಚಂದ್ರಕಾಂತ ಶರ್ಮ, ಐಟಿ ಉದ್ಯೋಗಿ

ಶನಿವಾರದ ಪ್ರದರ್ಶನ ವೈಭವದ ವಿಚಾರ ಕೇಳಿ ಕಷ್ಟಪಟ್ಟು ಟಿಕೆಟ್ ಸಂಪಾದಿಸಿ ಪ್ರದರ್ಶನಕ್ಕೆ ಬಂದೆ. ಗೆಳೆಯರು ತಂಡಗಳು ನಡೆಸುವ ಕಸರತ್ತನ್ನು ಇಂಚಿಂಚು ವರ್ಣಿಸಿದ್ದರು. ಭಾನುವಾರದ ಪ್ರದರ್ಶನ ಪೇಲವ ಎನಿಸಿತು. ಕೊನೆಯ ದಿನ ವರ್ಣರಂಜಿತ ಪ್ರದರ್ಶನ ಇದ್ದಿದ್ದರೆ ಚೆನ್ನಾಗಿತ್ತು.
-ಸುಧೀಂದ್ರ, ವಿದ್ಯಾರ್ಥಿ

ADVERTISEMENT

ವೀಕ್ಷಣಾ ಸ್ಥಳ ತುಂಬಾ ದೂರವಾಯಿತು. ಬಸ್ ಇಳಿದು ವೀಕ್ಷಣಾ ಸ್ಥಳ ತಲುಪಲು ಕನಿಷ್ಠ 30 ನಿಮಿಷಗಳು ಹಿಡಿಯಿತು. ಈ ಅಂತರವನ್ನು ಕಡಿವೆು ಮಾಡಲು ಗಮನ ಹರಿಸಬೇಕಿತ್ತು. ಅತ್ಯುತ್ತಮವಾಗಿ ಕಾರ್ಯಕ್ರಮ ಸಂಘಟಿಸಿದ್ದಾರೆ. ಭದ್ರತಾ ವ್ಯವಸ್ಥೆ ಇತರರಿಗೆ ಮಾದರಿ.
-ಸುನೀಲ್, ಬಿ.ಎ. ವಿದ್ಯಾರ್ಥಿ

ಸಂಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಸಂಚಾರ ಪೊಲೀಸರ ಹೆಗ್ಗಳಿಕೆ. ಮೊದಲ ನಾಲ್ಕು ದಿನ ನಮಗೆ ವಾಯುನೆಲೆಯೊಳಗೆ ಪ್ರವೇಶ ನೀಡಲೇ ಇಲ್ಲ. ಹಿರಿಯ ಅಧಿಕಾರಿಗಳ ಸ್ಥಿತಿಯು ಇದಕ್ಕಿಂತ ಭಿನ್ನವಾಗಿರಲಿಲ್ಲ. ಕೊನೆಯ ದಿನ ಮಾತ್ರ ಪ್ರದರ್ಶನ ವೀಕ್ಷಣೆಗೆ ಅವಕಾಶ ನೀಡಿದರು. ಈ ಧೋರಣೆ ಬೇಸರ ತರಿಸಿತು.
-ಗೊಲ್ಲಾಳಪ್ಪ, ಸಂಚಾರ ಪೊಲೀಸ್ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.