ADVERTISEMENT

ವಿವಾದಕ್ಕೆ ನಾನು ಜವಾಬ್ದಾರನಲ್ಲ : ಡಾ. ಎಸ್.ಎಲ್.ಭೈರಪ್ಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಬೆಂಗಳೂರು: `ನನ್ನ ಮನಸ್ಸಿಗೆ ಪದೇ ಪದೇ ಕಾಡುವ ವಿಷಯವನ್ನು ಬರವಣಿಗೆಗೆ ಆಯ್ಕೆ ಮಾಡಿಕೊಳ್ಳುತ್ತೇನೆ. ಬರೆಯುವಾಗ ಯಾವುದೇ ವಿವಾದವನ್ನು ನಿರೀಕ್ಷಿಸುವುದಿಲ್ಲ. ವಿವಾದ ಉಂಟಾದರೆ ಅದಕ್ಕೆ ನಾನು ಜವಾಬ್ದಾರನಲ್ಲ~.

- ಇದು ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ ಉತ್ತರ. ಜಯನಗರದ 4ನೇ ಬ್ಲಾಕ್‌ನಲ್ಲಿರುವ ವಿಜಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ `ಭೈರಪ್ಪನವರ ಸಾಹಿತ್ಯದಲ್ಲಿ ಮೌಲ್ಯ ಸಂಘರ್ಷ~ ಕುರಿತ ವಿಚಾರ ಸಂಕಿರಣದಲ್ಲಿ ಗುರುವಾರ ನಡೆದ ಸಂವಾದದಲ್ಲಿ ಸಭಿಕರ ಪ್ರಶ್ನೆಗೆ ಭೈರಪ್ಪ ನೇರ ಪ್ರತಿಕ್ರಿಯೆ ನೀಡಿದರು. ಅವರು ಸಭಿಕರ ಲಿಖಿತ ಪ್ರಶ್ನೆಗೆ ನೀಡಿದ ಉತ್ತರದ ಸಂಕ್ಷಿಪ್ತ ವಿವರ ಹೀಗಿದೆ.

ಪ್ರಶ್ನೆ: ನೀವು ಆಯ್ಕೆ ಮಾಡಿಕೊಳ್ಳುವ ವಸ್ತು ವಿವಾದಾತ್ಮಕವೋ ಅಥವಾ ವಿವಾದಾತ್ಮಕ ವಿಷಯವನ್ನೇ ಆಯ್ಕೆ ಮಾಡಿಕೊಳ್ಳುತ್ತೀರೋ?
ಭೈರಪ್ಪ: ವಾಸ್ತವಿಕವಾಗಿ ನಾನು ಯಾವುದೇ ವಸ್ತುವನ್ನು ಆಯ್ದುಕೊಳ್ಳುವುದಿಲ್ಲ. ಒಂದು ವಿಷಯ ಮನಸ್ಸಿನಲ್ಲಿ ಮೂಡುತ್ತದೆ. ಒಂದೆರಡು ದಿನ ಕಾಡಿದ ಬಳಿಕ ಆ ವಿಷಯ ಮರೆತು ಹೋಗುತ್ತದೆ. ನಾಲ್ಕಾರು ದಿನಗಳ ಬಳಿಕ ಮತ್ತೆ ಅದೇ ವಿಷಯ ಮನಸ್ಸಿನಲ್ಲಿ ಮೂಡುತ್ತದೆ. ಹಲವು ಬಾರಿ ಮನಸ್ಸಿಗೆ ಬಂದ ನಂತರವಷ್ಟೇ ಬರೆಯಲು ಮುಂದಾಗುತ್ತೇನೆ. ನನ್ನ ಆಯ್ಕೆ ವಸ್ತುವಿಗೆ ವಿವಾದಗಳನ್ನು ನಿರೀಕ್ಷಿಸುವುದಿಲ್ಲ. ವಿವಾದ ಉಂಟಾದರೆ ನಾನು ಜವಾಬ್ದಾರನಲ್ಲ.

ಪ್ರ: ಹಿಂದೂ ಧರ್ಮ ಮತ್ತು ಬ್ರಾಹ್ಮಣ್ಯದ ಮೇಲ್ಮೆಯನ್ನು ಕಾದಂಬರಿಯಲ್ಲಿ ಎತ್ತಿ ಹಿಡಿಯುವ ನೀವು ಜಾತೀಯತೆ, ಸನಾತನ ಧರ್ಮದ ಮೌಢ್ಯದ ಬಗ್ಗೆ ಏಕೆ ಬರೆಯುವುದಿಲ್ಲ?
ಜಾತೀಯತೆಯ ಸೂಕ್ಷ್ಮತೆ ಹಾಗೂ ಜಾತಿಯ ಬೇರುಗಳನ್ನು `ದಾಟು~ ಕಾದಂಬರಿಯಲ್ಲಿ ನಾನು ವಿಶ್ಲೇಷಣೆ ಮಾಡಿರುವಷ್ಟು ಬೇರೆ ಯಾವುದೇ ಕಾದಂಬರಿಯಲ್ಲೂ ಮಾಡಿಲ್ಲ. ಆದರೂ ಜಾತೀಯತೆಯ ಎಲ್ಲ ಸಮಸ್ಯೆಗಳಿಗೂ ಬ್ರಾಹ್ಮಣರೇ ಕಾರಣ ಎಂಬುದರಲ್ಲಿ ಅರ್ಥವಿಲ್ಲ. ಸರ್ಕಾರದ ಬಳಿ ಸಾಕಷ್ಟು ಹಣವಿದೆ. ಅದರಿಂದ ಎಲ್ಲರಿಗೂ ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕಿದೆ. ಇಂದು ದೇಶವನ್ನು ಕಾಡುತ್ತಿರುವುದು ಭ್ರಷ್ಟಾಚಾರವೇ ಹೊರತು ಜಾತೀಯತೆಯಲ್ಲ. ಆದರೆ ರಾಜಕಾರಣಿಗಳು ಹಾಗೂ ಸಾಹಿತಿಗಳಷ್ಟೇ ಜಾತೀಯತೆಯ ಬಗ್ಗೆ ಮಾತನಾಡುತ್ತಿದ್ದಾರೆ.

ಪ್ರ: ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ತಾವೇಕೆ ಮುಂದಾಳತ್ವ ವಹಿಸಬಾರದು?
ನಾಯಕತ್ವ ವಹಿಸಲು ಹೋದರೆ ಕಾದಂಬರಿ ಬರೆಯುವವರು ಯಾರು? ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಮುಂದಾಳತ್ವ ವಹಿಸಿದರೆ, ಅಣ್ಣಾ ಹಜಾರೆ ಅವರು ಕಾದಂಬರಿ ಬರೆಯುತ್ತಾರೆಯೇ? ಹಜಾರೆ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಉಪವಾಸದಲ್ಲಿ ಪಾಲ್ಗೊಂಡಿದ್ದೆ. ಈ ರೀತಿಯಲ್ಲಿ ಹೋರಾಟಕ್ಕೆ ಬೆಂಬಲ ನೀಡುವೆ.

ಪ್ರ: ನಿಮ್ಮ ಸಾಹಿತ್ಯಕ್ಕೆ ಸರಿಯಾದ ವಿಮರ್ಶೆ ಬಂದಿಲ್ಲ, ಏಕೆ?
ನನ್ನ ಸಾಹಿತ್ಯಕ್ಕೆ ಬಂದಿರುವಷ್ಟು ಉತ್ತಮ ವಿಮರ್ಶೆ ಬೇರೆ ಯಾವುದೇ ಸಾಹಿತಿಗಳ ಸಾಹಿತ್ಯಕ್ಕೂ ಬಂದಿಲ್ಲ. ನಿನ್ನೆಯಿಂದ ನಡೆಯುತ್ತಿರುವ ವಿಚಾರ ಸಂಕಿರಣದಲ್ಲೂ ಉತ್ತಮ ವಿಮರ್ಶೆ ಬಂದಿದೆ. ಯಾವುದೋ ಒಂದು ಗುಂಪಿನವರು ವಿಮರ್ಶೆ ಮಾಡಿಲ್ಲ ಎಂಬ ಮಾತ್ರಕ್ಕೆ ಚಿಂತೆ ಏಕೆ. ಆ ಗುಂಪಿಗೆ ಏಕೆ ಅನಗತ್ಯವಾಗಿ ಪ್ರಾಶಸ್ತ್ಯ ಕೊಡಬೇಕು.

ಪ್ರ: ರಾಮಾಯಣ ಕುರಿತು ಯಾಕೆ ಬರೆಯಬಾರದು?
ರಾಮಾಯಣ ಕುರಿತು ಹೊಸದಾಗಿ ಬರೆಯುವುದು ಏನಿದೆ ಎಂಬ ಪ್ರಶ್ನೆ ನನ್ನನ್ನು ಸಾಕಷ್ಟು ಬಾರಿ ಕಾಡಿದೆ. ಅಲ್ಲದೇ ರಾಮಾಯಣದ ಮೇಲೆ ದಾಳಿ ಮಾಡದ ಪಂಥಗಳೇ ಇಲ್ಲ. ಸ್ತ್ರೀವಾದಿಗಳು ಸಹ ರಾಮಾಯಣದ ಟೀಕೆ ಮಾಡಿದ್ದಾರೆ. ಹೊಸದಾಗಿ ಹೇಳುವ ಅಂಶ ಏನಿದೆ ಎಂಬುದು ಹೊಳೆದರೆ ಬರೆಯಬಹುದು.

ಪ್ರ: 50 ವರ್ಷಗಳ ನಂತರ ತಮ್ಮ ಕೃತಿಗಳನ್ನು ಓದುವವರು ಇರುತ್ತಾರೆಯೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಏಕೆ?
ಮನುಷ್ಯನ ಸ್ವಭಾವ, ಆಸೆ- ನಿರಾಸೆಗಳು ಬದಲಾಗುವುದಿಲ್ಲ. ನಾಗರಿಕತೆ ಬದಲಾದರೂ ಇದು ಬದಲಾಗುವುದಿಲ್ಲ. ಇದು ಮೂಲ ಪ್ರವೃತ್ತಿ. ಹಾಗಾಗಿ ಈ ಪ್ರಶ್ನೆ ಮೂಡಿತು.


ಒಂದು ವರ್ಷ ಭಾಗವಹಿಸುವುದಿಲ್ಲ
ಹೊಗಳಿಕೆಯ ಯೋಗ್ಯತೆ ಏನು ಎಂಬುದನ್ನು ತಿಳಿಯುವ ಪ್ರಬುದ್ಧತೆ ನನಗಿದೆ. ಮೂರು ವಾರಗಳಿಂದ ಕಾರ್ಯಕ್ರಮ, ಭಾಷಣ, ಸಂವಾದ ನಡೆಸಿ ಸಾಕಾಗಿದೆ. ನನಗೆ ಕೆಲವು ಬದ್ಧತೆಗಳಿವೆ. ಅವು ಮುಗಿದ ಬಳಿಕ ಮುಂದೆ ಒಂದು ವರ್ಷ ಕಾಲ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಭಾಷಣ ಮಾಡುವುದಿಲ್ಲ.

ಹೊಗಳಿಕೆ ಎಂಬುದು ಹೊನ್ನ ಶೂಲ. ಅದಕ್ಕೆ ನಾನು ಬಲಿಯಾಗುವುದಿಲ್ಲ ಎಂದು ಎಸ್. ಎಲ್.ಭೈರಪ್ ಹೇಳಿದರು.
ತಮಗೆ ಸಾಕಷ್ಟು ಹೊಗಳಿಕೆ, ಮೆಚ್ಚುಗೆ ವ್ಯಕ್ತವಾಗುತ್ತಿರುವುದಕ್ಕೆ ಅಹಂಕಾರ ಮೂಡಿದ ಅನುಭವವಾಗಿದೆಯೇ? ಎಂಬ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.