ADVERTISEMENT

ವಿವೇಕಾನಂದರನ್ನು ಪಟ್ಟಭದ್ರರ ಕಪಿಮುಷ್ಠಿಯಿಂದ ಬಿಡಿಸಬೇಕಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಜನವರಿ 2016, 19:32 IST
Last Updated 19 ಜನವರಿ 2016, 19:32 IST
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಯರ್‌ ಬಿ.ಎನ್.ಮಂಜುನಾಥರೆಡ್ಡಿ, ಸಚಿವರಾದ ಅಭಯಚಂದ್ರ ಜೈನ್‌, ದಿನೇಶ್‌ ಗುಂಡೂರಾವ್‌, ಆರ್.ರೋಷನ್‌ ಬೇಗ್‌, ಕೆ.ಜೆ.ಜಾರ್ಜ್‌ ಅವರು ಪುಷ್ಪನಮನ ಸಲ್ಲಿಸಿದರು   ಪ್ರಜಾವಾಣಿ ಚಿತ್ರ
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಯರ್‌ ಬಿ.ಎನ್.ಮಂಜುನಾಥರೆಡ್ಡಿ, ಸಚಿವರಾದ ಅಭಯಚಂದ್ರ ಜೈನ್‌, ದಿನೇಶ್‌ ಗುಂಡೂರಾವ್‌, ಆರ್.ರೋಷನ್‌ ಬೇಗ್‌, ಕೆ.ಜೆ.ಜಾರ್ಜ್‌ ಅವರು ಪುಷ್ಪನಮನ ಸಲ್ಲಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಯಿಂದ ಸ್ವಾಮಿ ವಿವೇಕಾನಂದರನ್ನು ಬಿಡಿಸಬೇಕಾದದ್ದು ಇಂದಿನ ಅಗತ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸ್ವಾಮಿ ವಿವೇಕಾನಂದರ 153ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರದ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ಸಪ್ತಾಹ’ದಲ್ಲಿ ‘ಪ್ರತಿಜ್ಞಾ ವಿಧಿ’ ಬೋಧಿಸಿ ಅವರು ಮಾತನಾಡಿದರು.

‘ಯುವಜನರಲ್ಲಿ ಅಪಾರ ನಂಬಿಕೆ ಹೊಂದಿದ್ದ ವಿವೇಕಾನಂದರು ಯುವಜನ ಜಾಗೃತಗೊಂಡರೆ ನಾವು ಸಮೃದ್ಧ, ಜಾತ್ಯತೀತ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದು ಪ್ರತಿಪಾದಿಸುತ್ತಿದ್ದರು. ಹೀಗಾಗಿ, ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದಕ್ಕಾಗಿ ಯುವ ಸಪ್ತಾಹವನ್ನು ಸರ್ಕಾರದ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಭಾರತದ ಜನಸಂಖ್ಯೆಯಲ್ಲಿ ಶೇ 40ಕ್ಕೂ ಅಧಿಕ ಯುವ ಜನರಿದ್ದಾರೆ. ಅವರಲ್ಲಿ ಶೇ 75 ರಷ್ಟು ಜನರು 40 ವರ್ಷದೊಳಗಿನವರಾಗಿದ್ದಾರೆ. ಬೇರೆ ಯಾವ ದೇಶ ಕೂಡ ಇಷ್ಟೊಂದು ಅಗಾಧ ಪ್ರಮಾಣದ ಯುವಶಕ್ತಿಯನ್ನು ಹೊಂದಿಲ್ಲ. ಹೀಗಾಗಿ, ಎಲ್ಲ ರಂಗದಲ್ಲಿ ಯುವಶಕ್ತಿಯ ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ’ ಎಂದರು.

‘ನಮ್ಮ ಸಮಾಜದಲ್ಲಿ ಅಧಿಕಾರ, ಸಂಪತ್ತು, ಅವಕಾಶ, ವಿದ್ಯೆ ಕೆಲವರ ಸೊತ್ತಾಗಬಾರದು. ಎಲ್ಲರಿಗೂ ಉತ್ತಮ ಶಿಕ್ಷಣ, ಅನ್ನ, ಬಟ್ಟೆ, ಸೂರು ಒದಗಿಸುವ ಕೆಲಸವಾಗಬೇಕು ಎಂದು ವಿವೇಕಾನಂದರು ಹೇಳುತ್ತಿದ್ದರು. ಆ ದಿಸೆಯಲ್ಲಿ ನಮ್ಮ ಸರ್ಕಾರ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದೆ’ ಎಂದು ಹೇಳಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಯಾವ ಧರ್ಮ ಜಾತಿ ಮತ್ತು ಲಿಂಗ ಅಸಮಾನತೆ ವ್ಯವಸ್ಥೆ ಹೊಂದಿರುತ್ತದೆಯೋ, ಅದು ಧರ್ಮವೇ ಅಲ್ಲ ಎಂದು ಹೇಳುತ್ತಿದ್ದ ವಿವೇಕಾನಂದರು, ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎಲ್ಲೆಡೆ ಸಾರಿದಂತೆ ಅದರೊಳಗಿನ ಕಂದಾಚಾರಗಳನ್ನು ನೇರವಾಗಿ ಖಂಡಿಸಿದ್ದರು. ಹೀಗಾಗಿ ಅವರೊಬ್ಬ ಸಮಾಜ ಚಿಂತಕರಾಗಿ ಕಾಣುತ್ತಾರೆ’ ಎಂದು ತಿಳಿಸಿದರು.

‘ಭಿನ್ನಾಭಿಪ್ರಾಯಗಳು ಬೀದಿಗೆ ಬಿದ್ದು, ಧರ್ಮಗಳು ಜಾತಿಯ ಮಟ್ಟಕ್ಕೆ ಇಳಿಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿವೇಕಾನಂದರ ಸಾಮರಸ್ಯದ ಸಂದೇಶ ಗಳನ್ನು ಯುವ ಸಮೂಹವು ಅರಿಯ ಬೇಕಿದೆ. ಹೀಗಾಗಿ, ಸರ್ಕಾರ ವಿವೇಕಾ ನಂದರ ಜಯಂತಿಯನ್ನು ‘ಸಾಮರಸ್ಯ ದಿನ’ವನ್ನಾಗಿ ಆಚರಿಸಬೇಕು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಕಲಾಕೇಂದ್ರದ ಕಲಾವಿದರು ವಿವೇಕಾನಂದರ ಸಂದೇಶ ಆಧಾರಿತ ‘ವಿಶ್ವ ವಂದ್ಯ ವಿವೇಕಾನಂದ’ ನೃತ್ಯ ದೃಶ್ಯರೂಪಕ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.