ADVERTISEMENT

ವಿಶೇಷ ಪ್ರವರ್ಗದವರಿಗೆ ವಸತಿ ಭಾಗ್ಯ

ವಿಸ್ತ್ರೃತಾ ಯೋಜನಾ ವರದಿ ಸಿದ್ಧ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
ವಿಶೇಷ ಪ್ರವರ್ಗದವರಿಗೆ ವಸತಿ ಭಾಗ್ಯ
ವಿಶೇಷ ಪ್ರವರ್ಗದವರಿಗೆ ವಸತಿ ಭಾಗ್ಯ   

ಬೆಂಗಳೂರು: ವಿಶೇಷ ಪ್ರವರ್ಗದ 784 ಕುಟುಂಬಗಳಿಗೆ ಉಚಿತ ವಸತಿಗೃಹ ನಿರ್ಮಿಸಲು ನಗರ ಜಿಲ್ಲಾಡಳಿತ ₹37.24 ಕೋಟಿಯ ವಿಸ್ತೃತಾ ಯೋಜನಾ ವರದಿ ಸಿದ್ಧಪಡಿಸಿದೆ.

ಜಿಲ್ಲಾಧಿಕಾರಿ ವಿ.ಶಂಕರ್‌ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗುಂಜೂರು ಗ್ರಾಮದ ಸರ್ವೆ ಸಂಖ್ಯೆ 281ರಲ್ಲಿ 9 ಎಕರೆ 35 ಗುಂಟೆಯ ಒತ್ತುವರಿ ತೆರವುಗೊಳಿಸಲಾಗಿತ್ತು. ಅಲ್ಲಿ ವಸತಿಗೃಹ ನಿರ್ಮಿಸಲಾಗುತ್ತದೆ. ಪ್ರತಿ ಮನೆ ನಿರ್ಮಾಣಕ್ಕೆ ₹4.75 ಲಕ್ಷ ವೆಚ್ಚವಾಗಲಿದೆ. ಪ್ರತಿ ಮನೆಗೆ ರಾಜೀವ್‌ ಗಾಂಧಿ ವಸತಿ ನಿಗಮ ಹಾಗೂ ಪ್ರಧಾನಮಂತ್ರಿ ಆವಾಜ್‌ ಯೋಜನೆಯಡಿ ₹3.5 ಲಕ್ಷ ವೆಚ್ಚ ಭರಿಸಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವರಿಗೆ ಮನೆ ನಿರ್ಮಾಣಕ್ಕೆ ಉಳಿಕೆ ಮೊತ್ತವನ್ನು ಎಸ್‌ಸಿಪಿ/ ಟಿಎಸ್‌ಪಿ ಹಣ ಬಳಸುತ್ತೇವೆ. ಉಳಿದ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಕಾರ್ಪೊರೇಟ್‌ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್‌) ಹಣ ಪಡೆಯಲು ಉದ್ದೇಶಿಸಲಾಗಿದೆ’ ಎಂದರು.

‘ನಿರ್ಗತಿಕರು, ಲೈಂಗಿಕ ಕಾರ್ಯಕರ್ತರು, ದೇವದಾಸಿಯರು, ವಿಧವೆಯರು, ಜೀವ ವಿಮುಕ್ತರು, ಸಫಾಯಿ ಕರ್ಮಚಾರಿಗಳು, ಅಲೆಮಾರಿಗಳು, ಅಂಗವಿಕಲರು ಈ ಪ್ರವರ್ಗದಲ್ಲಿ ಸೇರಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಮಿನಿ ಉದ್ಯಾನಗಳ ನಿರ್ಮಾಣ: ಕಬ್ಬನ್‌ ಉದ್ಯಾನ ಹಾಗೂ ಲಾಲ್‌ಬಾಗ್ ಮಾದರಿಯಲ್ಲೇ ಜಿಲ್ಲೆಯ 4 ಕಡೆಗಳಲ್ಲಿ ಮಿನಿ ಉದ್ಯಾನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅರ್ಕಾವತಿ ಹಾಗೂ ಕುಮುದ್ವತಿ ಜಲಾನಯನ ಪ್ರದೇಶದ 1 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣ ಚಟುವಟಿಕೆಗೆ ಅವಕಾಶ ಇಲ್ಲ. ಅಂತಹ ಪ್ರದೇಶಗಳನ್ನು ಗುರುತಿಸಿ ಉದ್ಯಾನ ನಿರ್ಮಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಅಹವಾಲು ಆಲಿಸಲು ಹೈಕೋರ್ಟ್‌ ಸೂಚನೆ: ರಾಜರಾಜೇಶ್ವರಿನಗರದ ಐಡಿಯಲ್‌ ಹೋಮ್‌ ಟೌನ್‌ಶಿಪ್‌ನಲ್ಲಿರುವ ನಟ ದರ್ಶನ್‌ ಮನೆ, ಎಸ್‌.ಎಸ್‌. ಆಸ್ಪತ್ರೆ ಹಾಗೂ 69 ಮನೆಗಳ ಒತ್ತುವರಿ ತೆರವಿಗೆ ಮುನ್ನ ನೋಟಿಸ್‌ ನೀಡಿ ಅಹವಾಲು ಆಲಿಸಲು ಹೈಕೋರ್ಟ್‌ ನಿರ್ದೇಶನ ನೀಡಿದೆ. ಅದರ ಪ್ರಕಾರ ದಕ್ಷಿಣ ಉಪವಿಭಾಗಾಧಿಕಾರಿ ನೋಟಿಸ್‌ ನೀಡಲಿದ್ದಾರೆ ಎಂದು ಶಂಕರ್ ತಿಳಿಸಿದರು.

ನಾಳೆ ಜಿಲ್ಲಾ ಮಟ್ಟದ ಕಾರ್ಯಾಗಾರ: ‘ಕರ್ನಾಟಕ ಸ್ವರೂಪ ದರ್ಶನ (ವಿಷನ್‌ 2025)’ ಬಗ್ಗೆ ಜಿಲ್ಲಾ ಮಟ್ಟದ ಕಾರ್ಯಾಗಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇದೇ 21ರಂದು ಬೆಳಿಗ್ಗೆ 11ರಿಂದ ನಡೆಯಲಿದೆ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌, ವಿಷನ್‌ 2025ರ ಸಿಇಒ ರೇಣುಕಾ ಚಿದಂಬರಂ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಎಲ್‌.ಕೆ. ಅತೀಕ್‌, ತುಷಾರ್‌ ಗಿರಿನಾಥ್‌ ಭಾಗವಹಿಸುವರು’ ಎಂದರು.

‘ಈ ಯೋಜನೆಗೆ ಜಿಲ್ಲೆಯಲ್ಲಿ 13 ವಲಯಗಳನ್ನು ಗುರುತಿಸಲಾಗಿದ್ದು, ನಗರ ಯೋಜನಾ ತಜ್ಞರು, ಅಧಿಕಾರಿಗಳು, ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳ ಐದು ತಂಡಗಳನ್ನು ರಚಿಸಲಾಗಿದೆ’ ಎಂದರು

***
ಸ್ಪರ್ಧಾತ್ಮಕ ಪರೀಕ್ಷೆಗೆ ಸರ್ಕಾರದಿಂದಲೇ ತರಬೇತಿ ಕೇಂದ್ರ

‘ಭೋಗ್ಯದ (ಲೀಸ್‌) ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಮಾರತಹಳ್ಳಿ ಸಮೀಪದ ಮುನ್ನೇಕೊಳಾಲ್‌ನ ನವಜೀವನ ಟ್ರಸ್ಟ್‌ಗೆ ನೀಡಿದ್ದ 9 ಎಕರೆ 18 ಗುಂಟೆ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಗಿದ್ದು, ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೇಂದ್ರ ಸ್ಥಾಪಿಸಲು ಪ್ರಸ್ತಾವ ಸಿದ್ಧಪಡಿಸಲಾಗಿದೆ’ ಎಂದು ವಿ.ಶಂಕರ್‌ ತಿಳಿಸಿದರು.

‘ಕುಷ್ಠ ರೋಗಿಗಳ ಪುನರ್ವಸತಿ ಚಟುವಟಿಕೆಗಳನ್ನು ನಡೆಸಲು ಟ್ರಸ್ಟ್‌ಗೆ 9 ಎಕರೆ 20 ಗುಂಟೆ ಜಾಗವನ್ನು ಕಂದಾಯ ಇಲಾಖೆ ಮಂಜೂರು ಮಾಡಿತ್ತು. 2 ಗುಂಟೆ ಜಾಗವನ್ನಷ್ಟೇ ಕುಷ್ಠ ರೋಗಿಗಳ ಪುನವರ್ಸತಿ ಕೇಂದ್ರದ ಚಟುವಟಿಕೆಗೆ ಬಳಸಲಾಗುತ್ತಿದೆ. ಉಳಿದ ಜಾಗದಲ್ಲಿ ಟ್ರಸ್ಟ್‌ 12 ವರ್ಷಗಳ ಹಿಂದೆ ಸಿಬಿಎಸ್‌ಇ ಶಾಲೆಯೊಂದನ್ನು ಆರಂಭಿಸಿತ್ತು. ಈ ಶೈಕ್ಷಣಿಕ ವರ್ಷದ ಅಂತ್ಯದ ವರೆಗೆ ತರಗತಿಗಳನ್ನು ನಡೆಸಲು ಟ್ರಸ್ಟ್‌ಗೆ ಅನುಮತಿ ನೀಡಲಾಗಿದೆ’ ಎಂದರು.

‘ಇಲ್ಲಿ ಆರ್ಥಿಕ ಹಿಂದುಳಿದ 200 ವಿದ್ಯಾರ್ಥಿಗಳಿಗೆ ವಸತಿಸಹಿತ ತರಬೇತಿ ನೀಡಲಾಗುತ್ತದೆ. ಇದಕ್ಕೆ ಅನುದಾನ ನೀಡಲು ಸಮಾಜ ಕಲ್ಯಾಣ ಇಲಾಖೆ ಒಪ್ಪಿದೆ. ಸರ್ಕಾರದಿಂದಲೇ ನಡೆಸುವ ಇಂತಹ ಕೇಂದ್ರ ತಮಿಳುನಾಡಿನಲ್ಲಷ್ಟೇ ಇದೆ’ ಎಂದು ಅವರು ವಿವರ ನೀಡಿದರು.

***
ನಗರದ ಎಲ್ಲ ರಾಜಕಾಲುವೆಗಳ ಎರಡು ಸಲ ಸರ್ವೆ ನಡೆಸಿ ಒತ್ತುವರಿ ಗುರುತಿಸಿ ಬಿಬಿಎಂಪಿಗೆ ನೀಡಲಾಗಿದೆ. ನಮ್ಮಿಂದ ವಿಳಂಬವಾಗಿಲ್ಲ.
ವಿ.ಶಂಕರ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.