ಬೆಂಗಳೂರು: `ಗ್ಲಾಕೊಮಾದಂತಹ ಗಂಭೀರ ಕಾಯಿಲೆಯ ಕುರಿತು ಸಾಮಾನ್ಯ ಜನರಲ್ಲಿ ತೀವ್ರತರದ ಜಾಗೃತಿ ಮೂಡಿಸಬೇಕಿದ್ದು, ಈ ನಿಟ್ಟಿನಲ್ಲಿ ಎಲ್ಲಾ ವೈದ್ಯರು ಚಿಂತನೆ ನಡೆಸಬೇಕು~ ಎಂದು ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅಭಿಪ್ರಾಯಪಟ್ಟರು.
ಗ್ಲಾಕೊಮಾ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ವಿಶ್ವ ಗ್ಲಾಕೊಮಾ ಸಪ್ತಾಹದ ಅಂಗವಾಗಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ವೈದ್ಯರು ಗ್ರಾಮೀಣ ಭಾಗದಲ್ಲಿ ಗ್ಲಾಕೊಮಾ ಕಾಯಿಲೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಮೊದಲ ಹಂತದಲ್ಲಿ ಗುರುತಿಸಲ್ಪಟ್ಟಾಗ ಮಾತ್ರ ಈ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಾಗುವುದರಿಂದ ಇದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ~ ಎಂದು ಹೇಳಿದರು.
ನಟ ಶಿವರಾಜ್‌ಕುಮಾರ್, `40 ವರ್ಷ ಮೇಲ್ಪಟ್ಟವರು ಅಗತ್ಯವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಗ್ಲಾಕೊಮಾದಿಂದ ದೃಷ್ಟಿದೋಷ ಉಂಟಾಗುವುದರಿಂದ ಮಧ್ಯವಯಸ್ಸಿನವರು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು~ ಎಂದು ಸಲಹೆ ನೀಡಿದರು.
ಬೆಂಗಳೂರು ಅಪ್ತಾಲ್ಮಿಕ್ ಸೊಸೈಟಿಯ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ, ` ಈ ಒಂದು ವಾರವನ್ನು ಗ್ಲಾಕೊಮಾ ಕುರಿತು ಜಾಗೃತಿ ಮೂಡಿಸುವ ಸಲುವಾಗಿಯೇ ಮೀಸಲಿಡಲಾಗಿದ್ದು, ಈ ಬಗ್ಗೆ ತಿಳಿದುಕೊಳ್ಳಲು ಸಾಮಾನ್ಯ ಜನರು ಆಸಕ್ತಿ ವಹಿಸಬೇಕು~ ಎಂದರು.
ನಟಿ ರಾಗಿಣಿ ದ್ವಿವೇದಿ ಇತರರು ಉಪಸ್ಥಿತರಿದ್ದರು. ಸ್ವಾತಂತ್ರ್ಯ ಉದ್ಯಾನದಿಂದ ಕಬ್ಬನ್ ಉದ್ಯಾನದವರೆಗೆ ನಡೆದ ಜಾಥಾದಲ್ಲಿ ನಟ ನಟಿಯರು, ವಿದ್ಯಾರ್ಥಿಗಳು, ವೈದ್ಯರು ಸೇರಿದಂತೆ ನೂರಾರು ಮಂದಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.