ADVERTISEMENT

ವಿಶ್ವ ಸಂಗೀತದಲ್ಲಿ ಭಾರತದ ಸೌಹಾರ್ದ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:40 IST
Last Updated 23 ಜನವರಿ 2011, 19:40 IST

ಬೆಂಗಳೂರು: ‘ಭಾರತೀಯ ಸಂಗೀತವು ವಿಶ್ವದ ಇತರ ದೇಶಗಳ ಸಂಗೀತ ಪ್ರಕಾರಗಳು ಹಾಗೂ ಉಪಕರಣಗಳನ್ನು ತನ್ನ ಅವಶ್ಯಕತೆಗೆ ಅಳವಡಿಸಿಕೊಂಡು ಸೌಹಾರ್ದತೆ ಮೆರೆದಿದೆ’ ಎಂದು ಕೆನಡಾದ ಟೊರೆಂಟೊ ನಗರದ ಯಾರ್ಕ್ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಪ್ರಾಧ್ಯಾಪಕ ಡಾ.ತ್ರಿಚಿ ಶಂಕರನ್ ಅಭಿಪ್ರಾಯಪಟ್ಟರು.

ನಗರದ ‘ಇಂದಿರಾನಗರ ಸಂಗೀತ ಸಭಾ’ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ಆಶಯ ಭಾಷಣ ಮಾಡಿದ ಅವರು, ‘ಕಾಲಕಾಲಕ್ಕೆ ಸಂಗೀತ ಪರಿಕರಗಳು ಹಾಗೂ ನುಡಿಸುವ ಶೈಲಿಗಳೂ ಬದಲಾದವು. ಈ ಪ್ರಕ್ರಿಯೆ ಶತಮಾನಗಳವರೆಗೆ ನಡೆಯಿತು. ಕರ್ನಾಟಕ ಸಂಗೀತ ಪರಂಪರೆಯಲ್ಲಿ ಈ ಬದಲಾವಣೆ ಕಂಡುಬಂದಿದೆ’ ಎಂದರು.

‘ಆಫ್ರಿಕಾ ದೇಶಗಳ ಹಾಗೂ ಜಪಾನಿನ ಆರ್ಕೆಸ್ಟ್ರಾ ಶೈಲಿಯನ್ನು ಭಾರತದಲ್ಲೂ ಅಳವಡಿಸಿಕೊಳ್ಳಲಾಗಿದೆ. ಈ ಬೆಳವಣಿಗೆ ವಿಶ್ವ ಸಂಗೀತದಲ್ಲಿ ಭಾರತದ ಸೌಹಾರ್ದತೆಯನ್ನು ತಿಳಿಸುತ್ತದೆ’ ಎಂದು ಶಂಕರನ್ ನುಡಿದರು.

ಸಮ್ಮೇಳನದಲ್ಲಿ ಖ್ಯಾತ ವಯಲಿನ್ ವಾದಕ ಲಾಲ್‌ಗುಡಿ ಜಿ.ಜಯರಾಮನ್ ಅವರಿಗೆ ‘ಪುರಂದರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇಂದಿರಾನಗರ ಸಂಗೀತ ಸಭಾದ ಅಧ್ಯಕ್ಷ ಎಸ್.ಎನ್.ಎಸ್.ಮೂರ್ತಿ ಸಭಾದ ಚಟುವಟಿಕೆಗಳ ಕುರಿತು ವಿವರಿಸಿದರು. ಸಮ್ಮೇಳನದ ಅಂಗವಾಗಿ ಸಂಗೀತ ಹಾಗೂ ವಾದ್ಯಗೋಷ್ಠಿ ಹಮ್ಮಿಕೊಂಡಿದ್ದು, ಜ. 26ರವರೆಗೆ ನಡೆಯಲಿದೆ.

ಸಂಸ್ಥೆಯ ವಿಳಾಸ- ಪುರಂದರ ಸಂಗೀತ ಸಭಾ, 8ನೇ ಮುಖ್ಯರಸ್ತೆ, ಇಂದಿರಾನಗರ ಕ್ಲಬ್ ಹತ್ತಿರ. ಎಚ್‌ಎಎಲ್ ಎರಡನೇ ಹಂತ. ದೂರವಾಣಿ-2521 5525.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.