ADVERTISEMENT

ವೃತ್ತಿ ಜಂಜಡದಲ್ಲಿ ಖಾಸಗಿ ಬದುಕು ಕಳೆದುಕೊಳ್ಳದಿರಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:35 IST
Last Updated 8 ಮಾರ್ಚ್ 2012, 19:35 IST

ಬೆಂಗಳೂರು:`ವೃತ್ತಿ ಬದುಕು ಮತ್ತು ಖಾಸಗಿ ಬದುಕು ಎರಡು ಬೇರೆ ಬೇರೆಯಾಗಿವೆ.  ಮಹಿಳೆಯು ವೃತ್ತಿ ಬದುಕಿನಲ್ಲಿ ತನ್ನ ಖಾಸಗಿ ಬದುಕನ್ನು ಹಾಳು ಮಾಡಿಕೊಳ್ಳಬಾರದು~ ಎಂದು ಡಾಟಿ ಸದಾನಂದಗೌಡ ಹೇಳಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಗರದ ಬೆಂಗಳೂರು ಜಲಮಂಡಳಿ ರಜತ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಮಹಿಳೆಗೆ ಪ್ರಮುಖವಾದುದು ತಾಯ್ತನ. ಅದನ್ನು ತನ್ನ ವೃತ್ತಿ ಬದುಕಿನಲ್ಲೂ ಮರೆಯಬಾರದು. ಅದನ್ನು ಸಮರ್ಥವಾಗಿ ನಿಭಾಯಿಸಿದಾಗಲೇ ಅವಳು ಒಬ್ಬ ಪರಿಪೂರ್ಣ ಮಹಿಳೆಯಾಗಲು ಸಾಧ್ಯ~ ಎಂದರು.
`ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮದಿಂದ ಮಕ್ಕಳು ತಪ್ಪು ದಾರಿ ತುಳಿಯುತ್ತಿದ್ದಾರೆ. ಅವರನ್ನು ಸರಿದಾರಿಗೆ ತಂದು, ಅವರ ಭವಿಷ್ಯ ರೂಪಿಸುವಲ್ಲಿ ಮಹಿಳೆ ಅದರಲ್ಲೂ ಮುಖ್ಯವಾಗಿ ತಾಯಿಯ ಪಾತ್ರ ಬಲು ದೊಡ್ಡದು~ ಎಂದು ಹೇಳಿದರು.

`ಎಲ್ಲವುಗಳಿಗೂ ಒಂದೊಂದು ದಿನಾಚರಣೆಗಳಿವೆ. ಅಪ್ಪಂದಿರ ದಿನ, ಪ್ರೇಮಿಗಳ ದಿನ, ಮಕ್ಕಳ ದಿನ. ಅದರಂತೆ ಮಹಿಳೆಯರಿಗೂ ಒಂದು ದಿನವೆಂದು ಘೋಷಿಸಿ, ಅದನ್ನು ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ. ಮಹಿಳೆಯರಿಗೆ ಇದು ಸಂಸ್ಮರಣೀಯ ದಿನವೂ ಆಗಿದೆ~ ಎಂದರು.

`ಈ ದಿನ ಜಗತ್ತಿನೆಲ್ಲೆಡೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದಕ್ಕೆ ಮಹಿಳೆಯರ ಹೋರಾಟ, ಅವರ ದಿನನಿತ್ಯದ ಬದುಕಿಗೆ ಸಲ್ಲುವ ಗೌರವವಾಗಿದೆ~ ಎಂದು ಹೇಳಿದರು.

ಆಕಾಶವಾಣಿ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ಸುಮಂಗಳ ಮುಮ್ಮಿಗಟ್ಟಿ ಮಾತನಾಡಿ, `ಈ ವರ್ಷದ ಮಹಿಳಾ ದಿನಾಚರಣೆಯ ಘೋಷವಾಕ್ಯವೆಂದರೆ, ಗ್ರಾಮೀಣ ಮಹಿಳೆಯನ್ನು ಸಶಕ್ತಗೊಳಿಸಿ: ಹಸಿವು ಬಡತನ ದೂರ ಮಾಡಿ ಎಂಬುದಾಗಿದೆ. ಇದು ಪೂರ್ಣತರವಾಗಿ ಜಾರಿಗೆ ಬರಬೇಕು~ ಎಂದರು.

`ಅದ್ದೂರಿ ಜೀವನ, ಮೊಬೈಲಿನಲ್ಲಿ ಮಾತನಾಡುವುದು ನಿಜವಾಗಲೂ ಸಶಕ್ತಿಕರಣವಲ್ಲ. ಯಾವ ಮಹಿಳೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೋ ಅವಳು ಸಶಕ್ತ ಮಹಿಳೆಯಾಗಿದ್ದಾಳೆ~ ಎಂದು ಹೇಳಿದರು. `ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರಕ್ಕೆ ತುಂಬಾ ವ್ಯತ್ಯಾಸವಿದೆ. ಸ್ವಾತಂತ್ರ್ಯ ಯಾವತ್ತೂ ಅತಿಯಾಗಿ ಅದು ಸ್ವೇಚ್ಛಾಚಾರವಾಗಬಾರದು~ ಎಂದು ಹೇಳಿದರು.

`ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ತುಂಬ ಮುಖ್ಯವಾಗಿದೆ. ಔದ್ಯೋಗಿಕ ರಂಗದಲ್ಲೂ ಮಹಿಳೆ ಹಿಂದೆ ಬಿದ್ದಿಲ್ಲ. ಎಲ್ಲ ರಂಗದಲ್ಲೂ ಮುಂದುವರಿದಿರುವ ಮಹಿಳೆ ನಿಜಕ್ಕೂ ಸಶಕ್ತಳು~ ಎಂದರು. ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಗೌರವ ಗುಪ್ತ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ಜಲಮಂಡಳಿಯ ಪ್ರಧಾನ ಎಂಜಿನಿಯರ್ ಟಿ.ವೆಂಕಟರಾಜು, ನಟಿ ನಯನ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.