ಬೆಂಗಳೂರು: ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ದುಷ್ಕರ್ಮಿಗಳು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಜೆ.ಪಿ.ನಗರದಲ್ಲಿ ನಡೆದಿದೆ.ಜೆ.ಪಿ.ನಗರ ಒಂದನೇ ಹಂತದ ಹತ್ತನೇ `ಬಿ~ ಅಡ್ಡರಸ್ತೆ ನಿವಾಸಿ ವೆಂಕಟೇಶಯ್ಯ (76) ಮತ್ತು ಅವರ ಪತ್ನಿ ಸ್ವರ್ಣಾಂಬ (68) ಕೊಲೆಯಾದವರು.
ವೆಂಕಟೇಶಯ್ಯ ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಸೇವೆ ಸಲ್ಲಿಸಿ 1994ರಲ್ಲಿ ನಿವೃತ್ತರಾಗಿದ್ದರು. ಮೂಲತಃ ಆನೇಕಲ್ ತಾಲ್ಲೂಕಿನವರಾದ ಸ್ವರ್ಣಾಂಬ ದಂಪತಿಗೆ ಮಕ್ಕಳಿರಲಿಲ್ಲ.
ದಂಪತಿ, ದೀಪ್ತಿ ಮತ್ತು ಪದ್ಮಾ ಎಂಬ ಮಹಿಳೆಯರನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದರು.
ಆ ಮಹಿಳೆಯರು ಮೂರ‌್ನಾಲ್ಕು ದಿನಗಳಿಂದ ದಂಪತಿಯ ಮನೆಯ ಬಳಿ ಬಂದು ಬೀಗ ಹಾಕಿದ್ದರಿಂದ ವಾಪಸ್ ಹೋಗಿದ್ದರು. ದೀಪ್ತಿ, ಶುಕ್ರವಾರ ಬೆಳಿಗ್ಗೆ ಮನೆಯ ಬಳಿ ಬಂದಾಗ ಒಳ ಭಾಗದಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡು ಬಾಗಿಲು ಬಡಿದಿದ್ದಾಳೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದರಿಂದ ಅನುಮಾನಗೊಂಡ ಆಕೆ ಸ್ವರ್ಣಾಂಬ ಅವರ ತಂಗಿ ಲಲಿತಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಚನ್ನಸಂದ್ರದಲ್ಲಿರುವ ಲಲಿತಾ ಮತ್ತು ಕುಟುಂಬ ಸದಸ್ಯರು ಮನೆಯ ಬಳಿ ಬಂದು ಬಾಗಿಲು ಒಡೆದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ದಂಪತಿಯನ್ನು ನಾಲ್ಕೈದು ದಿನಗಳ ಹಿಂದೆಯೇ ಕೊಲೆ ಮಾಡಿರುವ ದುಷ್ಕರ್ಮಿಗಳು ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ದಂಪತಿ 34 ವರ್ಷಗಳ ಹಿಂದೆ ಜೆ.ಪಿ.ನಗರದಲ್ಲಿ ಸ್ವಂತ ಮನೆ ಕಟ್ಟಿಸಿಕೊಂಡು ಅಲ್ಲಿಯೇ ವಾಸವಾಗಿದ್ದರು. ಆ ಮನೆಯ ಹಿಂದಿನ ಮನೆ ಮತ್ತು ಮೇಲ್ಭಾಗದ ಕೊಠಡಿಯನ್ನು ಬಾಡಿಗೆಗೆ ಕೊಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
`ಮೃತರ ಶವಗಳು ಮಲಗುವ ಕೋಣೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ವೆಂಕಟೇಶಯ್ಯ ಅವರ ಶವ ಮಂಚದ ಮೇಲೆ ಮತ್ತು ಅವರ ಪತ್ನಿಯ ಶವ ಮಂಚದ ಪಕ್ಕದಲ್ಲಿ ನೆಲದ ಮೇಲೆ ಬಿದ್ದಿತ್ತು. ಹಂತಕರು ದಂಪತಿಯ ತಲೆಗೆ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ~ ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಸುದ್ದಿಗಾರರಿಗೆ ತಿಳಿಸಿದರು.
`ವೆಂಕಟೇಶಯ್ಯ ಮತ್ತು ಸ್ವರ್ಣಾಂಬ ಅವರಿಗೆ ಯಾರೂ ಶತ್ರುಗಳಿರಲಿಲ್ಲ. ಸೌಮ್ಯ ಸ್ವಭಾವದವರಾದ ಅವರು ಯಾರೊಂದಿಗೂ ಹಣಕಾಸು ವ್ಯವಹಾರ ಸಹ ಇಟ್ಟುಕೊಂಡಿರಲಿಲ್ಲ~ ಎಂದು ಸಂಬಂಧಿಕ ಸತ್ಯಪ್ರಕಾಶ್ ಹೇಳಿದರು.
`ವೆಂಕಟೇಶಯ್ಯ ಮತ್ತು ನಾನು 30 ವರ್ಷಗಳಿಂದ ಸ್ನೇಹಿತರು. ಆತ ಪ್ರತಿನಿತ್ಯ ನನ್ನೊಂದಿಗೆ ವಾಯುವಿಹಾರಕ್ಕೆ ಬರುತ್ತಿದ್ದ. ಕೆಲ ತಿಂಗಳುಗಳಿಂದ ಆತನ ಆರೋಗ್ಯ ಹದಗೆಟ್ಟಿದ್ದರಿಂದ ವಾಯುವಿಹಾರಕ್ಕೆ ಬರುವುದನ್ನು ನಿಲ್ಲಿಸಿದ್ದ~ ಎಂದು ವೆಂಕಟೇಶಯ್ಯ ಅವರ ಮನೆಯಿಂದ ಸ್ವಲ್ಪ ದೂರದಲ್ಲೇ ವಾಸವಾಗಿರುವ ರಾಮಚಂದ್ರಯ್ಯ ಹೇಳಿದರು.
`ಕರೆ ಮಾಡಿದ್ದಳು~
`ಸೋಮವಾರ ಮಧ್ಯಾಹ್ನ ನನ್ನ ಮೊಬೈಲ್‌ಗೆ ಕರೆ ಮಾಡಿದ್ದ ಅಕ್ಕ, ಮತ್ತೊಬ್ಬ ಸಹೋದರಿಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಳು. ನಾಲ್ಕು ಮಂದಿ ಕೂಲಿ ಕೆಲಸಗಾರರಿಂದ ಮನೆಯ ನೀರಿನ ತೊಟ್ಟಿಯನ್ನು (ಸಂಪ್) ಸ್ವಚ್ಛ ಮಾಡಿಸುತ್ತಿದ್ದೇನೆ. ಆ ಕೆಲಸ ಪೂರ್ಣಗೊಂಡ ಬಳಿಕ ಮತ್ತೆ ಮಾತನಾಡುತ್ತೇನೆ ಎಂದು ಹೇಳಿ ಅಕ್ಕ ಕರೆ ಸ್ಥಗಿತಗೊಳಿಸಿದ್ದಳು. ಆ ನಂತರ ಆಕೆ ಕರೆ ಮಾಡಲಿಲ್ಲ~ ಎಂದು ಲಲಿತಾ ತಿಳಿಸಿದರು.
`ಸಂಪ್ ಸ್ವಚ್ಛಗೊಳಿಸಲು ಬಂದಿದ್ದ ಕೂಲಿ ಕಾರ್ಮಿಕರು ಈ ಕೊಲೆ ಮಾಡಿರಬಹುದೆಂಬ ಶಂಕೆ ಇದೆ. ಮನೆಗೆಲಸದವರ ಮೇಲೂ ಅನುಮಾನವಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ~ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ದೂರದ ಸಂಬಂಧಿಕರು
`ಸ್ವರ್ಣಾಂಬ ದಂಪತಿ ನನ್ನ ದೂರದ ಸಂಬಂಧಿಕರು. ಒಂದು ತಿಂಗಳ ಹಿಂದೆಯಷ್ಟೇ ಅವರ ಮನೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ದೆ. ಸೋಮವಾರ ಬೆಳಿಗ್ಗೆ ದಂಪತಿಗೆ ಅನ್ನ ಮತ್ತು ಸಾಂಬಾರ್ ಮಾಡಿಕೊಟ್ಟು ಮನೆಗೆ ಹೋಗಿದ್ದೆ. ಆ ನಂತರ ಮಂಗಳವಾರ ಬೆಳಿಗ್ಗೆ ಮನೆಯ ಬಳಿ ಬಂದಾಗ ಬಾಗಿಲು ಬಂದ್ ಆಗಿತ್ತು.
ಅವರು ಸಂಬಂಧಿಕರ ಮನೆಗೆ ಹೋಗಿರಬಹುದೆಂದು ಭಾವಿಸಿ ವಾಪಸ್ ಹೋದೆ. ಬುಧವಾರ ಅವರ ಮನೆಯ ಸ್ಥಿರ ದೂರವಾಣಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ~ ಎಂದು ಪದ್ಮಾ `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.