ADVERTISEMENT

ವೈಕುಂಠ ಏಕಾದಶಿ: ದೇಗುಲಗಳಿಗೆ ಲಡ್ಡು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:48 IST
Last Updated 18 ಡಿಸೆಂಬರ್ 2012, 19:48 IST

ಬೆಂಗಳೂರು:  ವೈಕುಂಠ ಏಕಾದಶಿಯ ಪ್ರಯುಕ್ತ ಮುಜರಾಯಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ ಅವರು ಸ್ವಂತ ಖರ್ಚಿನಲ್ಲಿ ಲಕ್ಷಾಂತರ ಲಡ್ಡುಗಳನ್ನು ತಯಾರಿಸಿ ರಾಜ್ಯದ ವಿವಿಧ ದೇವಸ್ಥಾನಗಳಿಗೆ ವಿತರಿಸಲಿದ್ದಾರೆ. 

ಈ ಬಗ್ಗೆ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಗವಿಗಂಗಾಧರೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಛತ್ರವೊಂದರಲ್ಲಿ ಲಡ್ಡುಗಳನ್ನು ತಯಾರಿಸಲಾಗುತ್ತಿದೆ. ಐವತ್ತಕ್ಕೂ ಹೆಚ್ಚು ದೇವಸ್ಥಾನಗಳ ಭಕ್ತರು ಪ್ರಸಾದದ ರೂಪದಲ್ಲಿ ಲಡ್ಡು ಪಡೆದುಕೊಳ್ಳಲಿದ್ದಾರೆ' ಎಂದು ತಿಳಿಸಿದರು.

`ಮುಜರಾಯಿ ಇಲಾಖೆಗೆ ಸಚಿವನಾದಾಗ ಮೊದಲ ಬಾರಿಗೆ ಈ ರೀತಿಯ ಲಡ್ಡು ವಿತರಣಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೆ. ಐದನೇ ವರ್ಷದ ಈ ವಿತರಣೆಯಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ 3ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತಿದೆ. ಪ್ರತಿ ಲಡ್ಡು 100 ಗ್ರಾಂ ತೂಕ ಹೊಂದಿದ್ದು, ಕಳೆದ ಒಂದು ವಾರದಿಂದ 150 ಮಂದಿ ಬಾಣಸಿಗರು ಲಡ್ಡು ತಯಾರಿಕೆಯಲ್ಲಿ ನಿರತರಾಗಿದ್ದಾರೆ' ಎಂದು  ಹೇಳಿದರು.

`ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರುವ 35 ದೇವಸ್ಥಾನಗಳು ಹಾಗೂ ಕೋಲಾರ, ತುಮಕೂರು, ಮೈಸೂರು, ಚಿಕ್ಕತಿರುಪತಿ, ಚನ್ನಪಟ್ಟಣ, ಮುಳಬಾಗಿಲಿನಲ್ಲಿ ಇರುವ ಪ್ರಮುಖ ದೇವಸ್ಥಾನಗಳಿಗೆ ಡಿ. 22ರ ರಾತ್ರಿಯೊಳಗೆ ಈ ಲಡ್ಡುಗಳನ್ನು ಉಚಿತವಾಗಿ ಹಂಚಲಾಗುವುದು. ನಗರದ ಕೋಟೆ ವೆಂಕಟರಮಣ ದೇವಸ್ಥಾನ, ರಾಜಾಜಿನಗರದ ರಂಗನಾಥ ಸ್ವಾಮಿ ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಲಡ್ಡು ಲಭ್ಯವಿರಲಿದೆ' ಎಂದು ತಿಳಿಸಿದರು.

`ನಾನು ಬಿಜೆಪಿ'
ದೇವಸ್ಥಾನಕ್ಕೆ ನೀಡಲಾಗುತ್ತಿರುವ ಲಡ್ಡುಗಳನ್ನು ಶುದ್ಧ ನಂದಿನಿ ತುಪ್ಪದಲ್ಲಿ ತಯಾರಿಸಲಾಗುತ್ತದೆ ಎಂದು ಕೃಷ್ಣಯ್ಯ ಶೆಟ್ಟಿ ವಿವರಿಸುತ್ತಿದ್ದಂತೆ, ನೀವು ಬಿಜೆಪಿನಾ? ಕೆಜಿಪಿನಾ? ಎಂಬ ಪತ್ರಕರ್ತರ ಪ್ರಶ್ನೆಗೆ `ನಾನು ಪ್ಯೂರ್‌ಲೀ ಬಿಜೆಪಿ' ಎಂದು ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.