ಬೆಂಗಳೂರು: `ವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ ಪದವಿ ಪಡೆಯುವವರು ಪದವಿಯ ನಂತರ ಒಂದು ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದನ್ನು ಪ್ರಸಕ್ತ ವರ್ಷದಿಂದ ಕಡ್ಡಾಯಗೊಳಿಸಲಾಗುವುದು. ಈ ಆದೇಶ ಏಪ್ರಿಲ್ 1 ರಿಂದಲೇ ಜಾರಿಗೆ ಬರಲಿದೆ~ ಎಂದು ವೈದ್ಯಕೀಯ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ಗ್ರಾಮೀಣ ಭಾಗದಲ್ಲಿ ವೈದ್ಯರು ಮತ್ತು ನರ್ಸ್‌ಗಳ ಸೇವೆ ಅಗತ್ಯವಾಗಿರುತ್ತದೆ. ಆದ್ದರಿಂದ ಈ ಸಂಬಂಧ ಕಾನೂನನ್ನು ಜಾರಿಗೊಳಿಸಲಾಗುವುದು. ಇದರ ಆಧಾರದ ಮೇಲೆ ರಾಷ್ಟ್ರವ್ಯಾಪಿ ಇಂತಹ ಕಾನೂನು ಜಾರಿಗೆ ತರಲು ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು~ ಎಂದು ತಿಳಿಸಿದರು.
`ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಪದವಿ ಪಡೆದ ವೈದ್ಯರಿಗೆ ಒಂದು ವರ್ಷದ ತರಬೇತಿ ಅವಧಿಯಲ್ಲಿ ಕಿರಿಯ ವೈದ್ಯರಿಗೆ ನೀಡುವ ವೇತನ ಹಾಗೂ ಸ್ನಾತಕೋತ್ತರ ಪದವಿ ಪಡೆದ ವೈದ್ಯರಿಗೆ ಹಿರಿಯ ವೈದ್ಯರಿಗೆ ನೀಡುವ ವೇತನ ನೀಡಲಾಗುವುದು~ ಎಂದರು.
`ಗ್ರಾಮೀಣ ಭಾಗದಲ್ಲಿ ಅದೆಷ್ಟು ಜನರು ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ವೈದ್ಯರನ್ನು ನೀಡುತ್ತಿರುವ ಕರ್ನಾಟಕದಲ್ಲೇ ರೋಗಿಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚುತ್ತಿರುವುದು ಕಳವಳಕಾರಿ. ಈ ಬಗ್ಗೆ ಯುವ ವೈದ್ಯರು ಗಮನಹರಿಸಬೇಕು~ ಎಂದು ಸಲಹೆ ನೀಡಿದರು.
ನಾರಾಯಣ ಸಮೂಹ ಆಸ್ಪತ್ರೆಗಳ ಸ್ಥಾಪಕ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, `ರೋಗಿ ಗುಣಮುಖನಾಗಲು ಹಗಲಿರುಳು ಶ್ರಮಿಸುವವರೇ ಶ್ರೇಷ್ಠ ವೈದ್ಯರು. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು~ ಎಂದು ಸಲಹೆ ಮಾಡಿದರು.
`ವೈದ್ಯರು ನೈತಿಕ ಮೌಲ್ಯಗಳನ್ನು ಉಳಿಸಿಕೊಂಡೇ ವೃತ್ತಿಯಲ್ಲಿ ಮುಂದುವರಿಯಬೇಕು. ಹುಟ್ಟುತ್ತಿರುವ ಹೊಸ ರೋಗಗಳಿಗೆ ಕಡಿವಾಣ ಹಾಕಲು ಸದೃಢ ಮನಸ್ಸಿನ ವೈದ್ಯರ ಅಗತ್ಯವಿದ್ದು, ವೈದ್ಯಕೀಯ ಕಾಲೇಜುಗಳು ಈ ರೀತಿಯ ವೈದ್ಯರನ್ನು ರೂಪಿಸಬೇಕಾಗಿದೆ~ ಎಂದು ಆಶಿಸಿದರು.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್.ಶ್ರೀಪ್ರಕಾಶ್, ಸಂಸ್ಥೆಯ ನಿರ್ದೇಶಕ ಡಾ.ಓ.ಎಸ್.ಸಿದ್ದಪ್ಪ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.