ADVERTISEMENT

ವೈದ್ಯಕೀಯ ಸಿಇಟಿ ಅಕ್ರಮ: ಹೈಕೋರ್ಟ್‌ಗೆ ಆರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 20:05 IST
Last Updated 2 ಜನವರಿ 2012, 20:05 IST

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಬಳ್ಳಾರಿಯಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ಜರುಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯನ್ನು ಒಂದೆರಡು ದಿನದಲ್ಲಿ ಹೈಕೋರ್ಟ್‌ಗೆ ಸಿಐಡಿ ಪೊಲೀಸಲು ಸಲ್ಲಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಹೇಳಿದರು.

ಈ ಸಂಬಂಧದ ಆರೋಪ ಪಟ್ಟಿಯನ್ನು ಬಳ್ಳಾರಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಒಂದೆರಡು ದಿನದಲ್ಲಿ ಅದರ ಪ್ರತಿಯನ್ನು ಹೈಕೋರ್ಟ್‌ಗೂ ಸಲ್ಲಿಸಲಾಗುವುದು. ತಪ್ಪಿತಸ್ಥ 11 ಮಂದಿ ವೈದ್ಯರ ಎಂಬಿಬಿಎಸ್ ಪದವಿಯನ್ನೇ ರದ್ದು ಮಾಡುವಂತೆ ಹೈಕೋರ್ಟ್‌ಗೆ ಕೋರಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದರ ಜತೆಗೆ ಇಲಾಖಾ ವಿಚಾರಣೆ ಕೂಡ ಆರಂಭಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಪರೀಕ್ಷೆ: ಈ ವರ್ಷದ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ನಗರದಲ್ಲಿ ಮಾತ್ರ ನಡೆಸಲಾಗುವುದು. ಪರೀಕ್ಷೆ ಸಂದರ್ಭದಲ್ಲಿ ಅಕ್ರಮ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ಸಿಸಿ ಟಿವಿ ಅಳವಡಿಕೆ; ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳ ಗುರುತನ್ನು ಬಯೊಮೆಟ್ರಿಕ್ ಮೂಲಕ ದಾಖಲಿಸಲಾಗುವುದು. ಒಟ್ಟಿನಲ್ಲಿ ಅಕ್ರಮ ನಡೆಯದಂತೆ ಗಮನ ನೀಡಲಾಗುವುದು. ಪರೀಕ್ಷೆ ಮುಗಿದ ದಿನವೇ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲಾಗುವುದು ಎಂದರು.

ನರ್ಸಿಂಗ್ ವಿ.ವಿ: ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಆದಷ್ಟು ಬೇಗ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.

ಶೆಟ್ಟಿ ನೇತೃತ್ವದ ಸಮಿತಿ ಕೊಟ್ಟಿರುವ ವರದಿಯನ್ನು ಸರ್ಕಾರದ ಮತ್ತೊಂದು ಸಮಿತಿ ಪರಿಶೀಲಿಸಲಿದೆ. ಅದರ ನಂತರ ಸಂಪುಟದಲ್ಲಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು. 2012-13ನೇ ಸಾಲಿನಿಂದ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬರಲಿದೆ ಎಂದರು. ನರ್ಸಿಂಗ್ ಶಾಲೆಗಳು 675 ಇವೆ. ನರ್ಸಿಂಗ್ ಕಾಲೇಜುಗಳು 241, ಪ್ಯಾರಾ ಮೆಡಿಕಲ್ ಕಾಲೇಜುಗಳು 251 ಇವೆ. ಇವೆಲ್ಲವೂ ಈ ಉದ್ದೇಶಿತ ವಿ.ವಿ. ವ್ಯಾಪ್ತಿಗೆ ಬರಲಿವೆ ಎಂದರು.

`ಸೂಕ್ತ ಪಠ್ಯಕ್ರಮ ಇಲ್ಲ. ಹೀಗಾಗಿ ಎಲ್ಲವನ್ನೂ ಮೇಲ್ದರ್ಜೆಗೇರಿಸಿ ಹೊಸದಾಗಿ 40 ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಕಲಾ ವಿಭಾಗದಲ್ಲಿ ಪಿಯುಸಿ ಮಾಡಿದ ವಿದ್ಯಾರ್ಥಿಗಳಿಗೂ ನರ್ಸಿಂಗ್ ಕ್ಷೇತ್ರದಲ್ಲಿ ಉದ್ಯೋಗ ಲಭ್ಯವಾಗುವಂತೆ ಮಾಡುವ ಉದ್ದೇಶವೂ ಇದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.