ADVERTISEMENT

ವೈದ್ಯ, ದಂತ ವೈದ್ಯ ಪ್ರವೇಶ 2013ರಿಂದಲೇ ಎನ್‌ಇಇಟಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:25 IST
Last Updated 6 ಅಕ್ಟೋಬರ್ 2012, 19:25 IST

ಬೆಂಗಳೂರು: ವೈದ್ಯಕೀಯ/ ದಂತ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ದೇಶಾದ್ಯಂತ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.

ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ 2013ರಿಂದಲೇ ಎನ್‌ಇಇಟಿ ಜಾರಿಗೆ ತೀರ್ಮಾನಿಸಲಾಗಿದೆ. ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಗುರುವಾರದಿಂದ ಆನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ನ. 12ರ ವರೆಗೂ ಮುಂದುವರಿಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರಕಟಿಸಿದರು.

ನವೆಂಬರ್ 23ರಿಂದ ಡಿಸೆಂಬರ್ 6ರವರೆಗೆ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಎರಡು ಪ್ರತ್ಯೇಕ ರ‌್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

ಅಖಿಲ ಭಾರತ ಕೋಟಾದ ಶೇ 15ರಷ್ಟು ಸೀಟುಗಳಿಗೆ ಮಾತ್ರ ರಾಷ್ಟ್ರಮಟ್ಟದ ರ‌್ಯಾಂಕ್ ಪಟ್ಟಿ ಅನ್ವಯವಾಗಲಿದೆ. ಉಳಿದ ಸೀಟುಗಳ ಭರ್ತಿಗೆ ರಾಜ್ಯಮಟ್ಟದ ರ‌್ಯಾಂಕ್ ಪಟ್ಟಿ ಮಾನದಂಡವಾಗಲಿದೆ. ರಾಜ್ಯ ಸರ್ಕಾರದ ಮೀಸಲಾತಿ ಮತ್ತು ಶುಲ್ಕಕ್ಕೆ ಅನುಗುಣವಾಗಿ ಕೌನ್ಸೆಲಿಂಗ್ ಮೂಲಕ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದರು.

ಪದವಿ: ಎಂಬಿಬಿಎಸ್/ ಬಿಡಿಎಸ್ ಪದವಿ ಕೋರ್ಸ್ ಪ್ರವೇಶಕ್ಕೆ ಮೇ 12ರಂದು ಎನ್‌ಇಇಟಿ ನಡೆಯಲಿದೆ. ಡಿಸೆಂಬರ್ ಒಂದರಿಂದ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 2013ರ ಏಪ್ರಿಲ್ 15ರಿಂದ 30ರವರೆಗೆ ಪ್ರವೇಶ ಪತ್ರಗಳನ್ನು ಪಡೆಯಬಹುದಾಗಿದೆ.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಮಾತ್ರ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಪರೀಕ್ಷೆಯ ಹೊಣೆ ಹೊತ್ತಿರುವ ಸಿಬಿಎಸ್‌ಇ ಹೇಳಿದೆ. ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೈಸೂರು, ಗುಲ್ಬರ್ಗ, ಬೆಳಗಾವಿ, ಶಿವಮೊಗ್ಗದಲ್ಲೂ ಪರೀಕ್ಷಾ ಕೇಂದ್ರಗಳನ್ನು ತೆರೆಯುವಂತೆ ಮನವಿ ಮಾಡಲಾಗಿದೆ.

ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ತೆಗೆದುಕೊಳ್ಳುವುದರಿಂದ ಕನ್ನಡದಲ್ಲೂ ಎನ್‌ಇಇಟಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೋರಿ ಸಿಬಿಎಸ್‌ಇ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ತರಬೇತಿ: ಎನ್‌ಇಇಟಿ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನವೆಂಬರ್ ಒಂದರಿಂದ ಆರು ತಿಂಗಳ ಕಾಲ `ಚಂದನ ವಾಹಿನಿ~ ಮೂಲಕ ತರಬೇತಿ ನೀಡಲಾಗುವುದು. ಒಟ್ಟು 160 ಗಂಟೆಗಳ ಕಾಲ ಬೋಧಿಸಲಾಗುತ್ತದೆ. ವಿದ್ಯಾರ್ಥಿಗಳನ್ನು ಎನ್‌ಇಇಟಿಗೆ ಸಜ್ಜುಗೊಳಿಸುವುದಕ್ಕಾಗಿ ಐದು ಅಣಕು ಪರೀಕ್ಷೆಗಳನ್ನು ಸಹ ನಡೆಸಲಾಗುವುದು ಎಂದರು.

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ ಸಿಬಿಎಸ್‌ಇ ಸಿದ್ಧಪಡಿಸಿರುವ ಪಠ್ಯಕ್ರಮಕ್ಕೂ, ವಿದ್ಯಾರ್ಥಿಗಳು ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪಠ್ಯಕ್ರಮಕ್ಕೂ ಹೋಲಿಸಿದಾಗ ಶೇ 25ರಷ್ಟು ವ್ಯತ್ಯಾಸ ಇರುವುದು ಕಂಡು ಬಂದಿದೆ. ತಜ್ಞರಿಂದ ತರಬೇತಿ ಕೊಡಿಸುವ ಮೂಲಕ ಇದನ್ನು ಸರಿದೂಗಿಸಲಾಗುವುದು ಎಂದು ತಿಳಿಸಿದರು.

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಪ್ರಸ್ತುತ ರಾಷ್ಟ್ರಮಟ್ಟದಲ್ಲಿ 34 ಹಾಗೂ ರಾಜ್ಯದಲ್ಲಿ ಐದು ಪರೀಕ್ಷೆಗಳಿವೆ. ಏಕರೂಪ ಪ್ರವೇಶ ಪರೀಕ್ಷೆಯಿಂದಾಗಿ ವಿದ್ಯಾರ್ಥಿಗಳಿಗೆ ಆ ಪರೀಕ್ಷೆಗಳನ್ನು ಬರೆಯುವುದು ತಪ್ಪಲಿದೆ. ಕಾಮೆಡ್-ಕೆ, ಕರ್ನಾಟಕ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಡೀಮ್ಡ ವಿಶ್ವವಿದ್ಯಾಲಯಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲು ಇನ್ನು ಮುಂದೆ ಅವಕಾಶ ಇರುವುದಿಲ್ಲ.

ರಾಜ್ಯಮಟ್ಟದ ರ‌್ಯಾಂಕ್‌ಪಟ್ಟಿಗೆ ಅನುಗುಣವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕಾಮೆಡ್-ಕೆ, ಕೆಆರ್‌ಎಲ್‌ಎಂ, ಡೀಮ್ಡ ವಿಶ್ವವಿದ್ಯಾಲಯಗಳಿಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸಲು ಅವಕಾಶವಿದೆ.

ಎಂಬಿಬಿಎಸ್‌ನಲ್ಲಿ ಒಟ್ಟು 6,005 ಸೀಟುಗಳಿವೆ. ಈ ಪೈಕಿ 201 ಸೀಟುಗಳು ಅಖಿಲ ಭಾರತ ಕೋಟಾ ಮೂಲಕ, ಶೇ 20ರಷ್ಟು ಸೀಟುಗಳು ಆಡಳಿತ ಮಂಡಳಿ ಕೋಟಾ ಮೂಲಕ ಹಂಚಿಕೆಯಾಗಲಿವೆ.

4,600 ಸೀಟುಗಳು ಅರ್ಹತೆ ಆಧಾರದ ಮೇಲೆ ರಾಜ್ಯದ ವಿದ್ಯಾರ್ಥಿಗಳಿಗೆ ದೊರೆಯಲಿವೆ ಎಂದು ಅವರು ಹೇಳಿದರು.

ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜು, ನಗರದ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಸೇರಿದಂತೆ ಎರಡು ಖಾಸಗಿ, ಏಳು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರ ಮತ್ತು ಭಾರತೀಯ ವೈದ್ಯಕೀಯ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಆಯುರ್ವೇದ, ಯುನಾನಿ, ಹೋಮಿಯೋಪಥಿ, ನ್ಯಾಚುರೋಪಥಿ ಮತ್ತು ಯೋಗದಲ್ಲಿ ಸರ್ಕಾರಿ ಕೋಟಾದಡಿ 33 ಸೀಟುಗಳು, ಖಾಸಗಿ ಕಾಲೇಜುಗಳಲ್ಲಿ 148 ಸೀಟುಗಳು ಖಾಲಿ ಇವೆ. ಇವುಗಳನ್ನು ಇದೇ 16ರ ಒಳಗೆ ನೇರವಾಗಿ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.