ADVERTISEMENT

ವೈರಿಗಳತ್ತ ಹದ್ದುಗಣ್ಣು ಭದ್ರತೆಗೆ ಬೈನಾಕ್ಯುಲರ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:55 IST
Last Updated 12 ಫೆಬ್ರುವರಿ 2011, 19:55 IST

ಯಲಹಂಕ ವಾಯುನೆಲೆ: ರಾತ್ರಿ ವೇಳೆಯಲ್ಲಿ ಶತ್ರುದೇಶದ ಸೈನಿಕರ ಚಲನವಲನಗಳನ್ನು ಪತ್ತೆ ಮಾಡಬಲ್ಲ ಆಧುನಿಕ ಮಾದರಿಯ 341 ಬೈನಾಕ್ಯುಲರ್‌ಗಳನ್ನು ಆಲ್ಫಾ ಡಿಸೈನ್ ಟೆಕ್ನಾಲಜಿಸ್ ಸಂಸ್ಥೆ ಗಡಿ ಭದ್ರತಾ ಪಡೆಗೆ ನೀಡಿದೆ.

‘ಪ್ರಜಾವಾಣಿ’ಗೆ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ (ತಯಾರಿಕಾ ವಿಭಾಗ) ಸಿ.ಎಂ. ಬಸಪ್ಪ ಅವರು, ‘ಈ ಬೈನಾಕ್ಯುಲರ್‌ಗಳನ್ನು ಬಳಸಿ ರಾತ್ರಿ ವೇಳೆಯಲ್ಲೂ ಶತ್ರುವಿನ ಚಲನವಲನಗಳನ್ನು ಪತ್ತೆ ಮಾಡಬಹುದು’ ಎಂದು ತಿಳಿಸಿದರು.

‘ಇದು 3.5 ಕಿ.ಮಿ. ದೂರದಲ್ಲಿರುವ ಮನುಷ್ಯರನ್ನು ಮತ್ತು 8.5 ಕಿ.ಮಿ ದೂರದಲ್ಲಿರುವ ವಾಹನಗಳನ್ನು ಗುರುತಿಸಬಲ್ಲದು’ ಎಂದರು.

ADVERTISEMENT

‘ಇದಲ್ಲದೆ, 1.5 ಕಿ.ಮಿ.ನಷ್ಟು ದೂರದಲ್ಲಿರುವ ವಸ್ತುಗಳನ್ನು ಗುರುತಿಸುವ ಬೈನಾಕ್ಯುಲರ್‌ಗಳನ್ನು ವಿದೇಶಗಳಿಗೂ ರಫ್ತು ಮಾಡಿದ್ದೇವೆ. ಈ ಬೈನ್ಯಾಕ್ಯುಲರ್‌ಗಳನ್ನು ಇತ್ತೀಚಿನ ಇರಾಕ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ವ್ಯಾಪಕವಾಗಿ ಬಳಸಿತ್ತು’ ಎಂದು ತಿಳಿಸಿದರು.

‘ನಾವು ಯುದ್ಧ ಟ್ಯಾಂಕ್, ಹೆಲಿಕಾಪ್ಟರ್ ಸಿಮ್ಯಲೇಟರ್‌ಗಳನ್ನೂ (ತರಬೇತಿ ನೀಡಲು ಉಪಯೋಗಿಸುವ ಮಾದರಿ) ತಯಾರಿಸುತ್ತೇವೆ’ ಎಂದರು.
‘ಯುದ್ಧರಂಗದಲ್ಲಿ ಶತ್ರುಗಳನ್ನು ಪತ್ತೆಹಚ್ಚಲು ಅನುಕೂಲ ಮಾಡಿಕೊಡುವ ಲೇಸರ್ ನಿರ್ದೇಶಿತ ಉಪಕರಣಗಳನ್ನೂ ನಾವು ತಯಾರಿಸುತ್ತೇವೆ.

ಈ ಕುರಿತಂತೆ ದೇಶದ ರಕ್ಷಣಾ ಇಲಾಖೆಯ ಜೊತೆ 113 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಉಪಕರಣಗಳು ಸುಮಾರು 10 ಕಿ.ಮಿ.ನಷ್ಟು ದೂರದಲ್ಲಿರುವ ಶತ್ರುವನ್ನೂ ಪತ್ತೆ ಮಾಡಲು ನೆರವಾಗುತ್ತವೆ’ ಎಂದು ತಿಳಿಸಿದರು.

ಇದು ಕನ್ನಡಿಗರ ಸಂಸ್ಥೆ: ಇಷ್ಟೆಲ್ಲ ಆಧುನಿಕ ಉಪಕರಣಗಳನ್ನು ತಯಾರಿಸುವ ಆಲ್ಫಾ ಡಿಸೈನ್ ಟೆಕ್ನಾಲಜಿಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದು ಅಪ್ಪಟ ಕನ್ನಡಿಗರು.
ಸಂಸ್ಥೆಯ ಸ್ಥಾಪಕರಾದ ಕರ್ನಲ್ (ನಿವೃತ್ತ) ಶಂಕರ್, ಮೋಹನ್ ರಾವ್ ಅವರು ಅಪ್ಪಟ ಕನ್ನಡಿಗರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.