ADVERTISEMENT

ವೈವಾಹಿಕ ಜಾಲತಾಣದಲ್ಲಿ ಪರಿಚಯ; ₹2.39 ಲಕ್ಷ ವಂಚನೆ

ತಾಯಿಯ 2ನೇ ಮದುವೆಗೆ ಸ್ವವಿವರ ಅಪ್‌ಲೋಡ್‌

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST

ಬೆಂಗಳೂರು: ‘ಶಾದಿ ಡಾಟ್ ಕಾಮ್’ ವೈವಾಹಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಮದುವೆ ಆಗುವುದಾಗಿ ಹೇಳಿ ನಗರದ ಮಹಿಳೆಯೊಬ್ಬರಿಂದ ₹2.39 ಲಕ್ಷ ಪಡೆದು ವಂಚಿಸಿದ್ದಾನೆ.

ಈ ಸಂಬಂಧ ಮಹಿಳೆಯ ಮಗಳು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ‘ನನ್ನ ತಂದೆ ತೀರಿಕೊಂಡಿದ್ದಾರೆ. ತಾಯಿ, ತಂಗಿ ಜತೆ ವಾಸವಿದ್ದೇನೆ. ತಾಯಿಗೆ ಎರಡನೇ ಮದುವೆ ಮಾಡಿಸುವುದಕ್ಕಾಗಿ ಅವರ ಸ್ವವಿವರವನ್ನು ತಂಗಿಯೇ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಳು’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಜಾಲತಾಣದಲ್ಲಿದ್ದ ಮಾಹಿತಿ ತಿಳಿದು ಏಪ್ರಿಲ್ 26ರಂದು ಕರೆ ಮಾಡಿದ್ದ ವ್ಯಕ್ತಿಯೊಬ್ಬ, ಡಾ. ಕೃಷ್ಣ ಶರ್ಮಾ ಎಂದು ಪರಿಚಯಿಸಿಕೊಂಡಿದ್ದ. ನಂತರ, ವಾಟ್ಸ್‌ಆ್ಯಪ್‌ ಮೂಲಕ ಚಾಟಿಂಗ್‌ ಮಾಡುತ್ತಿದ್ದ. ಲಂಡನ್‌ನಲ್ಲಿ ಇರುವುದಾಗಿ ಹೇಳಿದ್ದ ಆತ, ಸದ್ಯದಲ್ಲೇ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದ.’ 

ADVERTISEMENT

‘ತನ್ನ ಬಳಿ ವಿದೇಶಿ ಹಣವಷ್ಟೇ ಇರುವುದಾಗಿ ಹೇಳಿ, ಪ್ರಯಾಣದ ಖರ್ಚಿಗಾಗಿ ಭಾರತೀಯ ಕರೆನ್ಸಿ ಕಳುಹಿಸುವಂತೆ ಕೇಳಿದ್ದ. ಅದನ್ನು ನಂಬಿದ್ದ ತಾಯಿ ಸೆಂಟ್ರಲ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್‌ ಖಾತೆಗಳಿಗೆ ₹2.39 ಲಕ್ಷ ಜಮೆ ಮಾಡಿದ್ದರು. ಮರುದಿನವೇ ಆರೋಪಿ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.