ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಿಂದ ಕೇವಲ ಐದಾರು ಕಿ.ಮೀ ದೂರದ ರಾಂಪುರದಲ್ಲಿ ಬಾಲ್ಯ ವಿವಾಹವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. - ಹೀಗೆ ಬಾಲ್ಯ ವಿವಾಹವಾಗಿರುವ ಬಾಲಕಿಯ ವಯಸ್ಸು 11 ಆಗಿದ್ದರೆ, ಬಾಲಕನ ವಯಸ್ಸು 17.
ರಾಮನಗರ ತಾಲ್ಲೂಕಿನ ಕಸಬಾ ಹೋಬಳಿಯ ಮಾಯಗಾನಹಳ್ಳಿ ಕ್ಲಸ್ಟರ್‌ನ ರಾಂಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ ಮೂರನೇ ತರಗತಿ ಪಾಸಾಗಿ, ಈ ವರ್ಷ ನಾಲ್ಕನೇ ತರಗತಿಗೆ ಪ್ರವೇಶ ಪಡೆಯಬೇಕಿದ್ದ ಬಾಲಕಿ ಈಗ ಸಂಸಾರದ ಸಂಕೋಲೆಯ ಬಂಧನಕ್ಕೆ ಒಳಗಾಗಿದ್ದಾಳೆ.
ರಾಂಪುರದಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ಪೂಜಾರಿ ಕಾಲೊನಿಯ ಇರುಳಿಗರ ಸಮುದಾಯದ ಚಿಕ್ಕೋನಯ್ಯ ಅವರ ಮಗಳಾದ ಈ ಬಾಲಕಿಯನ್ನು ಅಪ್ರಾಪ್ತ ಬಾಲಕನ ಜತೆಗೆ ವಿವಾಹ ಮಾಡಿಸಲಾಗಿದೆ.
ಈ ವಿವಾಹ ಶಾಲೆಯ ಬೇಸಿಗೆ ರಜೆ ಸಂದರ್ಭದಲ್ಲಿ ಜರುಗಿದೆ. ಈ ಕುರಿತು ರಾಂಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನರಸಿಂಹಯ್ಯ ಹಾಗೂ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಿಂಗರಾಜು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಪತ್ತೆಯಾದದ್ದು ಹೇಗೆ?: `ಬೇಸಿಗೆ ರಜೆಯ ಅವಧಿಯಲ್ಲಿ ಬರಗಾಲದ ಬಿಸಿಯೂಟ ಕಾರ್ಯ ಶಾಲೆಯಲ್ಲಿ ಚಾಲ್ತಿಯಲ್ಲಿತ್ತು. ಆರಂಭದ ಕೆಲ ದಿನ ಬಿಸಿಯೂಟಕ್ಕೆ ಹಾಜರಾದ ಬಾಲಕಿ ನಂತರ ಗೈರು ಹಾಜರಾದಳು. ಈ ಬಗ್ಗೆ ವಿಚಾರಿಸಿದಾಗ ತೋಟ ಕಾಯಲು ಹೋಗುತ್ತಿದ್ದಾಳೆ ಎಂದು ಗೊತ್ತಾಯಿತು. ನಂತರ ಶಾಲೆ ಆರಂಭವಾಗಿ ಕೆಲ ದಿನಗಳಾದರೂ ಬಾಲಕಿ ಶಾಲೆಗೆ ಬಾರದಿದ್ದಾಗ ಇತರ ಮಕ್ಕಳಲ್ಲಿ ವಿಚಾರಿಸಿದಾಗ ಆ ಬಾಲಕಿಗೆ ಮದುವೆ ಆಗಿರುವುದು ತಿಳಿದು ಬಂದಿತು. ಈ ಕುರಿತು ಪರಿಶೀಲನೆ ನಡೆಸಿದಾಗ ಅದು ಖಚಿತ ಎಂದು ಗೊತ್ತಾಯಿತು' ಎಂದು ಶಾಲೆಯ ಮುಖ್ಯಶಿಕ್ಷಕ ನರಸಿಂಹಯ್ಯ ಅವರು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
ಶಾಲಾ ದಾಖಲಾತಿಗಳ ಪ್ರಕಾರ ಬಾಲಕಿ 2002ರ ಮೇ 10ರಂದು ಜನಿಸಿದ್ದು, ಆಕೆಗೀಗ 11 ವರ್ಷ. ಅಲ್ಲದೆ ಬಾಲಕನಿಗೆ 17 ವರ್ಷವಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಕುರಿತು ಕೂಡಲೇ ನಾನು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ಅವರು ಹೇಳಿದರು. ಕೆಲ ವರ್ಷಗಳ ಹಿಂದೆ ರಾಮನಗರದಲ್ಲಿ ಸಾಮೂಹಿಕ ವಿವಾಹ ನಡೆದ ಸಂದರ್ಭದಲ್ಲಿ ಇಲ್ಲಿನ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ವಿವಾಹ ಮಾಡಿಸಲಾಗಿತ್ತು.
ಆಗ ನಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಅಲ್ಲದೆ ಬಾಲ್ಯ ವಿವಾಹದಿಂದ ಆಗುವು ದುಷ್ಪರಿಣಾಮಗಳ ಕುರಿತು ಆಗಾಗ ಶಾಲೆಯ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದೇನೆ. ಆದರೂ ನಮಗೆ ಗೊತ್ತಾಗದೆ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಬೇಸರ ಮೂಡಿಸಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಪೂಜಾರ ಕಾಲೊನಿಯಲ್ಲಿ ಇರುವ ಇರುಳಿಗರ ಸಮುದಾಯದವರು ಮದುವೆಯ ವಿಷಯ ಹೆಚ್ಚು ಬಹಿರಂಗವಾಗಲು ಬಿಡದೆ ದೇವಾಲಯಕ್ಕೆ ತೆರಳಿ ಮದುವೆ ಮಾಡುತ್ತಾರೆ. ಶಾಲೆಗೆ ಬೇಸಿಗೆ ರಜೆ ಇದ್ದಾಗ ಕೆಲವರು ಸೇರಿ ಈ ಇಬ್ಬರು ಅಪ್ರಾಪ್ತರಿಗೆ ಮದುವೆ ಮಾಡಿಸಿದ್ದಾರೆ. ಅದು ನನ್ನ ಗಮನಕ್ಕೆ ಬಂದ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವೆ ಎಂದು ಅವರು ತಿಳಿಸಿದರು.
ಠಾಣೆಯಲ್ಲಿ ದೂರು ದಾಖಲು: ಅಪ್ರಾಪ್ತ ಬಾಲಕ ಮತ್ತು ಬಾಲಕಿಯ ನಡುವೆ ಬಾಲ್ಯ ವಿವಾಹ ಆಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ರಾಧಾ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.