ADVERTISEMENT

ಶಾಂತಿಗಾಗಿ ಭಾರತೀಯ ತತ್ವದತ್ತ ವಿಶ್ವದ ಕಣ್ಣು

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 20:30 IST
Last Updated 16 ಜನವರಿ 2011, 20:30 IST

ಬೆಂಗಳೂರು: ‘ಇಂದು ಇಡೀ ವಿಶ್ವದ ದೃಷ್ಟಿ ಭಾರತದ ಮೇಲಿದೆ. ಆರ್ಥಿಕ ಹಿಂಜರಿತದಿಂದ ಇಡೀ ವಿಶ್ವಕ್ಕೇ ತೊಂದರೆಯಾದರೂ ನಮ್ಮ ಆರ್ಥಿಕ ವ್ಯವಸ್ಥೆ ಮಾತ್ರ ಗಟ್ಟಿಯಾಗಿತ್ತು. ಆದರೆ ಇಂಥ ಸಂದರ್ಭದಲ್ಲಿ ನಾವು ಮಾತ್ರ ನಮ್ಮ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದೇವೆ’ ಎಂದು ಶ್ರೀ ಜ್ಞಾನಸಾಗರಜಿ ಮಹಾರಾಜ್ ಅವರು ಅಭಿಪ್ರಾಯಪಟ್ಟರು.

ಜೈನ ಎಂಜಿನಿಯರುಗಳ ವೇದಿಕೆ ಇಲ್ಲಿನ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ‘ಜೈನ ಎಂಜಿನಿಯರುಗಳ ಸಮಾವೇಶ - 2011’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

‘ಪಾಶ್ಚಾತ್ಯರಲ್ಲಿ ಇವತ್ತು ಸಾಕಷ್ಟು ಹಣವಿರಬಹುದು. ಆದರೆ ಅವರಲ್ಲಿ ಶಾಂತಿಯಿಲ್ಲ. ಶಾಂತಿಗಾಗಿ ಇಡೀ ಜಗತ್ತು ಭಾರತೀಯ ತತ್ವಗಳೆಡೆ ದೃಷ್ಟಿ ಹರಿಸುತ್ತಿದೆ’ ಎಂದರು.
‘ಭಗವಾನ್ ಮಹಾವೀರರು ಕೇವಲ ಮನುಷ್ಯರಲ್ಲಿ ಮಾತ್ರ ದೈವತ್ವವನ್ನು ಕಂಡವರಲ್ಲ; ಪ್ರಕೃತಿಯ ಸಕಲ ಚರಾಚರ ವಸ್ತುಗಳಲ್ಲೂ ಅವರು ಕಂಡಿದ್ದು ದೈವತ್ವವನ್ನೇ’ ಎಂದರು.

ADVERTISEMENT

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿ ‘ಸಾರ್ವಜನಿಕ ಜೀವನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ತಲೆಮಾರಿನವರು ವೈಫಲ್ಯ ಕಂಡಿದ್ದಾರೆ’ ಎಂದು ವಿಷಾದಿಸಿದರು.

‘ಮುಂಬರುವ ಹತ್ತು ವರ್ಷಗಳಲ್ಲಿ ವಿಜ್ಞಾನ ಕ್ಷೇತ್ರ ಅನೇಕ ಅದ್ಭುತಗಳನ್ನು ಸಾಧಿಸಲಿದೆ. ಆ ಬದಲಾವಣೆಗಳು ಒಡ್ಡಲಿರುವ ಸವಾಲಿಗೆ ಸ್ಪಂದಿಸುವ ಶಕ್ತಿಯನ್ನು ನಾವು ನಮ್ಮ ಯುವ ಜನಾಂಗಕ್ಕೆ ನೀಡಬೇಕಿದೆ’ ಎಂದರು.

‘ವಿಜ್ಞಾನ ಇಂದು ಕಾಣುತ್ತಿರುವ ತೀವ್ರವಾದ ಬದಲಾವಣೆಯನ್ನು ಗಮನಿಸಿದರೆ, ನಮ್ಮ ಪಠ್ಯಕ್ರಮಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಯಿಸಬೇಕೆಂಬ ಭಾವನೆ ಮೂಡುತ್ತದೆ. ಅಲ್ಲದೆ ನಮ್ಮ ಶಿಕ್ಷಕರೂ ಕೂಡ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮೂಡಿಸುವ ವ್ಯಕ್ತಿತ್ವ ಹೊಂದಿರುವವರಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಜಗತ್ತಿನಲ್ಲಿಯೇ ಅತ್ಯಂತ ಅನನ್ಯ ಅಂಶಗಳನ್ನು ಜೈನ ತತ್ವ ಹೊಂದಿದೆ. ಆದರೆ ಇಂದು ನಾವೇ ಅದನ್ನು ಉಪೇಕ್ಷಿಸುತ್ತಿದ್ದೇವೆ’ ಎಂದು ವಿಷಾದಿಸಿದರು. ರಾಜ್ಯ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ವಿ. ಧನಂಜಯ ಕುಮಾರ್ ಮಾತನಾಡಿ, ‘ಜ್ಞಾನಸಾಗರಜಿ ಮಹಾರಜ್ ಅವರ ಮುಂದಾಳತ್ವದ ಕಾರಣ ಜೈನ ಸಮಾಜದವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಅಪೂರ್ವ ಅವಕಾಶ ಲಭ್ಯವಾಗಿದೆ. ಈ ಸಮ್ಮೇಳನದ ಮೂಲಕ ಜೈನ ಎಂಜಿನಿಯರುಗಳ ಪ್ರತಿಭೆಯ ಅನಾವರಣವಾಗಲಿ’ ಎಂದು ಆಶಿಸಿದರು.

ಶಾಸಕ ವಿಜಯ್ ಕುಮಾರ್, ಜೈನ ಎಂಜಿನಿಯರುಗಳ ವೇದಿಕೆಯ ಅಧ್ಯಕ್ಷ ಎಂ.ಜೆ. ಸುರೇಂದ್ರ ಕುಮಾರ್, ಕಾರ್ಯದರ್ಶಿ ಡಾ.ಎಸ್.ಪಿ. ರಾಜಮಾನೆ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.