ADVERTISEMENT

ಶಾಲೆಗೆ ರೂ 1 ಕೋಟಿ ಅನುದಾನ

ಸಚಿವ ಕಿಮ್ಮನೆ ರತ್ನಾಕರ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 19:30 IST
Last Updated 20 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ‘ಶಾಲೆಯಲ್ಲಿನ ಅವ್ಯವಸ್ಥೆಯನ್ನು ಸರಿ­ಪಡಿಸಲು ಕೂಡಲೇ ರೂ 1 ಕೋಟಿ ಅನುದಾನ ಬಿಡು­ಗಡೆ ಮಾಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

ಶುಕ್ರವಾರ ದೇವರ­ ಜೀವನಹಳ್ಳಿ ಸಮೀಪದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಹಲ್ಲಿ ಬಿದ್ದಿದ್ದ ಆಹಾರ ಸೇವಿಸಿ 355 ಮಕ್ಕಳು ಅಸ್ವಸ್ಥ­ಗೊಂಡಿದ್ದರು. ಹೀಗಾಗಿ, ಸಚಿವರು ಶನಿವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಶಾಲೆಯಲ್ಲಿ ಮೂಲಸೌಕರ್ಯಗಳಿಲ್ಲ, ಶುದ್ಧತೆ­ಯಿಲ್ಲ, ಕಟ್ಟಡಗಳು ಸರಿಯಾಗಿಲ್ಲ. ಒಟ್ಟಾರೆಯಾಗಿ ಶಾಲೆಯು ಅವ್ಯವಸ್ಥೆಯಿಂದ ಕೂಡಿದೆ. ಶಾಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

‘ಶುಕ್ರವಾರ ದಾಖಲಾಗಿದ್ದ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಆದರೆ, ಪೋಷಕರ ಒತ್ತಾ­ಯದ ಮೇರೆಗೆ 15 ರಿಂದ 20 ಮಕ್ಕಳನ್ನು ಶನಿವಾರ ಮತ್ತೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ’ ಎಂದು ಅಂಬೇಡ್ಕರ್‌ ಆಸ್ಪತ್ರೆಯ ವೈದ್ಯ ಪರಶುರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಕ್ಕಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗಿದೆ. ಬಹುತೇಕ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ’ ಎಂದರು.

ಪ್ರಕರಣ ದಾಖಲು
‘ಶಾಲೆಯ ಅಡುಗೆ ಕೋಣೆಯ ಮೇಲ್ವಿಚಾರಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ’ ಎಂದು ಆರೋಪಿಸಿ ಜರೀನಾ ಎಂಬ ಪೋಷಕರು ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಮೇಲ್ವಿಚಾರಕರ ವಿರುದ್ಧ ವಿಷಕಾರಿ ವಸ್ತುಗಳಿಗೆ ಸಂಬಂಧಪಟ್ಟಂತೆ ನಿರ್ಲಕ್ಷ್ಯ ತೋರಿದ (ಐಪಿಸಿ 284) ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ’
– ಸತೀಶ್ ಕುಮಾರ್,
ಪೂರ್ವ ವಿಭಾಗದ ಡಿಸಿಪಿ

ಇಸ್ಕಾನ್‌ ವಿವರಣೆ
ಅಕ್ಷಯ ಪಾತ್ರೆ ಯೋಜನೆ ಅಡಿತಯಾರಿಸುವ ಆಹಾರ ಗುಣಮಟ್ಟದಿಂದಲೇ ಇರುತ್ತದೆ. ಕಾಳಜಿ ವಹಿಸಿ ತಯಾರಿಸಲಾಗುತ್ತದೆ. ಶುಕ್ರವಾರ ಡಿ.ಜೆ.ಹಳ್ಳಿಯ ಉರ್ದು ಮಾದರಿ ಪ್ರಾಥಮಿಕ ಶಾಲೆಗೆ ನೀಡಿದ ಆಹಾರವನ್ನು ಬೇರೆ ಇತರೆ ಶಾಲೆಗಳಿಗೂ ನೀಡಲಾಗಿತ್ತು. ಆದರೆ, ಅಲ್ಲಿಂದ ಯಾವುದೇ ದೂರುಗಳು ದಾಖಲಾಗಿಲ್ಲ. ಆಹಾ­ರದ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲ­ಯಕ್ಕೆ ಕಳುಹಿಸಲಾಗಿದೆ ಎಂದು ಅಕ್ಷಯ ಪಾತ್ರೆ ಫೌಂಡೇಶನ್‌ ವಿವರಣೆ ನೀಡಿದೆ.

355 ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ: ಇಸ್ಕಾನ್‌ಗೆ ನೋಟಿಸ್‌
ಡಿ.ಜೆ.ಹಳ್ಳಿಯ ಸರ್ಕಾರಿ ಉರ್ದು ಶಾಲೆ­ಯಲ್ಲಿ ಶುಕ್ರವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಮಕ್ಕಳೆಲ್ಲರೂ ಆರೋಗ್ಯ­ವಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಊಟವನ್ನು ಸರಬರಾಜು ಮಾಡಿದ ಇಸ್ಕಾನ್‌ ಸಂಸ್ಥೆಗೆ ಪ್ರಕರಣದ ಮಾಹಿತಿ ನೀಡುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ. ಜತೆಗೆ ಈ ಸಂಬಂಧ ವಿಚಾರಣಾ ವರದಿ ತಯಾರಿಸಲಾಗು­ತ್ತಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ  ಕ್ರಮ ತೆಗೆದುಕೊಳ್ಳಲಾಗುವುದು.
– ಮೊಹಮದ್‌ ಮೊಹಿಸಿನ್‌, ಆಯುಕ್ತ.
ಸಾರ್ವಜನಿಕ ಶಿಕ್ಷಣ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.