ADVERTISEMENT

ಶಾಲೆಯಲ್ಲಿ ಯೋಗ ಕಡ್ಡಾಯ ಚಿಂತನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:25 IST
Last Updated 10 ಫೆಬ್ರುವರಿ 2012, 19:25 IST

ಬೆಂಗಳೂರು: ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶುಕ್ರವಾರ ಹೇಳಿದರು.
ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ `ಅಂತರರಾಷ್ಟ್ರೀಯ ಯೋಗ, ನ್ಯಾಚುರೋಪತಿ ಹಾಗೂ ಆರೋಗ್ಯ ಎಕ್ಸ್‌ಪೋ-2012~ ಉದ್ಘಾಟಿಸಿ ಹೇಳಿದರು.

`ಆಯುಷ್ ಇಲಾಖೆಯು ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನ ಸಹಯೋಗದಲ್ಲಿ ರಾಜ್ಯದ 10 ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ನ್ಯಾಚುರೋಪತಿ ಚಿಕಿತ್ಸೆ ನೀಡುವಂತಹ ಹೊರ ರೋಗಿ ಘಟಕಗಳನ್ನು ಪ್ರಾರಂಭಿಸಿದೆ. ಮುಂದಿನ ದಿನಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಹಂತ-ಹಂತವಾಗಿ ಈ ಘಟಕಗಳನ್ನು ಪ್ರಾರಂಭಿಸಲು ಸರ್ಕಾರ ಉದ್ದೇಶಿಸಿದೆ~ ಎಂದು ಅವರು ಹೇಳಿದರು.

ಪಠ್ಯ ಕ್ರಮದಲ್ಲಿ ಯೋಗ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, `ರಾಜ್ಯ ಸರ್ಕಾರ ಪ್ರೌಢ ಶಾಲಾ ಹಂತದಲ್ಲಿ ಯೋಗವನ್ನು ಪಠ್ಯ ಕ್ರಮವನ್ನಾಗಿ ಅಳವಡಿಸಬೇಕು~ ಎಂದರು.
`ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಪಡಿಸಬಹುದಾದಂತಹ ಸಾಂಪ್ರದಾಯಿಕ ಯೋಗ ಮತ್ತು ನ್ಯಾಚುರೋಪತಿ ಪದ್ಧತಿಯನ್ನು ಹೆಚ್ಚು ಜನಪ್ರಿಯಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ಅವರು ಒತ್ತಾಯಿಸಿದರು.

ಸಂಸದ ಆಸ್ಕರ್ ಫರ್ನಾಂಡೀಸ್ ಮಾತನಾಡಿ, `ಭಾರತದ ಪುರಾತನವಾದ ಯೋಗ, ಆಯುರ್ವೇದ ಹಾಗೂ ನ್ಯಾಚುರೋಪತಿಯನ್ನು ವಿಶ್ವದ ಇತರ ರಾಷ್ಟ್ರಗಳಲ್ಲೂ ಪ್ರಚುರಪಡಿಸುವ ಪ್ರಯತ್ನ ನಡೆಯಬೇಕಾಗಿದೆ. ಯೋಗವನ್ನು ಅಭ್ಯಾಸ ಮಾಡುವುದರಿಂದ ನಯಾ ಪೈಸೆ ಖರ್ಚಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ~ ಎಂದರು.

ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ, `ಯೋಗ ಯಾವುದೇ ಒಂದು ಧರ್ಮ ಮತ್ತು ವರ್ಗಕ್ಕೆ ಸೀಮಿತವಾಗಿಲ್ಲ. ಅದು ಎಲ್ಲ ಧರ್ಮ ಹಾಗೂ ವರ್ಗದ ಸ್ವತ್ತು. ಮಾನಸಿಕ ಒತ್ತಡ ನಿವಾರಣೆಗೆ ಯೋಗ ಬಹಳ ಅವಶ್ಯಕವಾಗಿದೆ~ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್, ಪೋರ್ಚುಗಲ್ ಯೋಗ ಪ್ರತಿಷ್ಠಾನದ ಅಧ್ಯಕ್ಷ ಸ್ವಾಮಿ ಅಮೃತ್ ಸೂರ್ಯಾನಂದ ಮಹಾರಾಜ್, ಪುಣೆಯ ರಮಾಮಣಿ ಅಯ್ಯಂಗಾರ್ ಮೆಮೋರಿಯಲ್ ಯೋಗ ಸಂಸ್ಥೆಯ ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಆಯುಷ್ ಇಲಾಖೆಯ ನಿರ್ದೇಶಕರಾದ ಜಿ.ಎನ್. ಶ್ರೀಕಂಠಯ್ಯ ಅವರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.