ADVERTISEMENT

ಶಾಲೆ ಬಂದ್‌ಗೆ ಬೆಂಬಲ ಇಲ್ಲ: ಕೆಎಫ್‌ಐಎಸ್‌ಎಂ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ಬೆಂಗಳೂರು: `ಕುಸ್ಮಾ ನಡೆಸುತ್ತಿರುವ ಶಾಲಾ ಬಂದ್‌ಗೆ ಬೆಂಬಲ ಇಲ್ಲ~ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಹಾಗೂ ರಾಜ್ಯ ಸ್ವತಂತ್ರ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ಕೆಎಫ್‌ಐಎಸ್‌ಎಂ) ಸ್ಪಷ್ಟಪಡಿಸಿವೆ.

`ಕುಸ್ಮಾ ಬಂದ್‌ನಲ್ಲಿ ಪಾಲ್ಗೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ ಅವರ ಬಂದ್‌ಗೆ ವಿರೋಧ ಇಲ್ಲ. ಅವರ ಬೇಡಿಕೆಗಳಿಗೆ ಸಹಮತ ಇದೆ~ ಎಂದು ರಾಜ್ಯ ಸ್ವತಂತ್ರ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಶಿವರಾಮೇಗೌಡ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಸ್ಕೂಲ್‌ಗಳು, ಇಂಟರ್ ನ್ಯಾಷನಲ್ ಶಾಲೆಗಳೂ ಸೇರಿದಂತೆ ಸಂಘಟನೆಯ ವ್ಯಾಪ್ತಿಯಲ್ಲಿ 1300 ಶಾಲೆಗಳಿವೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಬಂದ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಲಾಗಿದೆ. ಸರ್ಕಾರದ ಜೊತೆಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸ ಇದೆ. ಬಂದ್ ಕೊನೆಯ ಅಸ್ತ್ರ~ ಎಂದು ಅವರು ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಬಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

`ಬಂದ್‌ಗೆ ಬೆಂಬಲ ಇಲ್ಲ. ಆದರೆ ರಾಜ್ಯ ಸರ್ಕಾರ ಆರ್‌ಟಿಇ ಗೊಂದಲಗಳನ್ನು ಕೂಡಲೇ ನಿವಾರಿಸಲು ಕ್ರಮ ಕೈಗೊಳ್ಳಬೇಕು~ ಎಂದು ರಾಜ್ಯ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಘಟನೆ ಆಗ್ರಹಿಸಿದೆ.  ಸರ್ಕಾರದ ತಾರತಮ್ಯ:  `ಕುಸ್ಮಾ ಬೇಡಿಕೆಗಳಿಗೆ ನಮ್ಮ ಒಕ್ಕೂಟದ ಸಹಮತ ಇದೆ.

ಸಂಘಟನೆಯ ವ್ಯಾಪ್ತಿಯಲ್ಲಿ 800 ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದು, ಯಾವುದೇ ಶಾಲೆ ಬಂದ್‌ನಲ್ಲಿ ಪಾಲ್ಗೊಳ್ಳದಿರಲು ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ, ಶಾಲಾ ಬಂದ್ ನಡೆಸಿ ಪೋಷಕರು ಹಾಗೂ ಮಕ್ಕಳಿಗೆ ತೊಂದರೆ ನೀಡುವುದು ಸರಿಯಲ್ಲ. ಪ್ರೌಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಯಾರು ಎಂಬುದೇ ಸ್ಪಷ್ಟವಾಗಿಲ್ಲ. ಇಂತಹ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ~ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿಗಳಾದ ಶಶಿಕುಮಾರ್ ಮತ್ತು ಟಿ.ಕೆ.ನರಸೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

`ಆರ್‌ಟಿಇ ಗೊಂದಲದ ಬಗ್ಗೆ ಖಾಸಗಿ ಶಾಲೆಗಳ ಏಳು ಒಕ್ಕೂಟಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ ಕಾಯ್ದೆಯಲ್ಲಿ ಸ್ಪಷ್ಟತೆ ತರಬೇಕು ಎಂದು ಒತ್ತಾಯಿಸಿದ್ದವು. ಎಲ್ಲ ಸಂಘಟನೆಗಳ ಸಭೆ ಕರೆಯುವಂತೆ ವಿನಂತಿಸಲಾಗಿತ್ತು. ಆದರೆ, ಇದೀಗ ರಾಜ್ಯ ಸರ್ಕಾರ ಕುಸ್ಮಾ ಸಂಘಟನೆಯ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಲು ಮುಂದಾಗಿ ತಾರತಮ್ಯ ತೋರುತ್ತಿದೆ~ ಎಂದು ಅವರು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.