ADVERTISEMENT

ಶಾಸಕರಾದ ಪಾಲಿಕೆ ಸದಸ್ಯರು

ಹತ್ತು ತಿಂಗಳ ಹಿಂದಿನ ಚುಕ್ಕೆ ಗುರುತಿನ ಪ್ರಶ್ನೆಗೆ ಈಗ ಉತ್ತರ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:49 IST
Last Updated 21 ಜನವರಿ 2017, 19:49 IST

ಬೆಂಗಳೂರು:  ಪಾಲಿಕೆ ಸದಸ್ಯರು ಹತ್ತು ತಿಂಗಳ ಹಿಂದೆ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಈಗ ಉತ್ತರ ಬಂದರೆ, ಆ ಲಿಖಿತ ಉತ್ತರದಲ್ಲಿ ಮಹಾನಗರ ಪಾಲಿಕೆ ವಿಧಾನಸಭೆಯಾಗಿತ್ತು, ಪಾಲಿಕೆ ಸದಸ್ಯರು ಶಾಸಕರಾಗಿದ್ದರು!

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್‌ ಅವರು ಹತ್ತು ತಿಂಗಳ ಹಿಂದೆಯೇ ಪ್ರಶ್ನೆ ಕೇಳಿದ್ದರು. ಅವರಿಗೆ ಉತ್ತರ ಬಂದಿದ್ದು ಮಾತ್ರ ಈಗ. ಅದರಲ್ಲಿ ಇದ್ದುದು ಸಂಪೂರ್ಣ ಹಳೆಯ ಮಾಹಿತಿ. ಉತ್ತರದ ಮೇಲ್ಭಾಗದಲ್ಲಿ ವಿಧಾನಸಭೆ ಎಂದು ಬರೆದಿದ್ದರೆ, ‘ಉತ್ತರಿಸಬೇಕಾದ ಅಧಿಕಾರಿ’ ಎಂಬ ಕಾಲಂನಲ್ಲಿ ‘ವಿರೋಧಪಕ್ಷದ ನಾಯಕರು’ ಎಂದು ಬರೆಯಲಾಗಿತ್ತು.

ಉತ್ತರದ ಪ್ರತಿಗಳಲ್ಲಿ ಪದ್ಮನಾಭ ರೆಡ್ಡಿ ಹಾಗೂ ಎಸ್‌.ರಾಜು ಅವರನ್ನೂ ಶಾಸಕರೆಂದು ಉಲ್ಲೇಖಿಸಲಾಗಿತ್ತು. ಡೆಂಗಿ ಕುರಿತು ಮಾಹಿತಿ ಕೊಡಿ:  ಡೆಂಗಿ ಕಾಯಿಲೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ್ದರಿಂದ ಸಿಟ್ಟಿಗೆದ್ದ ಗುಣಶೇಖರ್‌, ಉತ್ತರದ ಪ್ರತಿಯನ್ನು ಹರಿದುಹಾಕಿದರು.

ADVERTISEMENT

‘ಡೆಂಗಿ ನಿಯಂತ್ರಣಕ್ಕಾಗಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಉದ್ದೇಶಕ್ಕಾಗಿ ಮೀಸಲಿಟ್ಟ ಹಣ ಪೋಲಾಗುತ್ತಿದೆ. ಗುತ್ತಿಗೆದಾರರ ಜತೆ ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಫಾಗಿಂಗ್‌ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವುದನ್ನು ಉಲ್ಲೇಖಿಸಿದ ಅವರು, ‘ಎಷ್ಟು ದಿನಕ್ಕೊಮ್ಮೆ ಫಾಗಿಂಗ್‌ ಮಾಡಲಾಗಿದೆ, ವಿವರ ಕೊಡಿ’ ಎಂದು ಕೇಳಿದರು.

‘ಬೀದಿನಾಯಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಿ’ ಎಂದು ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದರು. ‘ಬೀದಿನಾಯಿಗಳ ಜನನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಗೆ ಅವುಗಳನ್ನೇ ಕರೆತರುತ್ತೇವೆ’ ಎಂದು ಎಸ್‌.ರಾಜು ಹೇಳಿದರು.

ಪಟ್ಟಿ ಸಲ್ಲಿಸಲು ಸೂಚನೆ
ವಾರ್ಡ್‌ಮಟ್ಟದ ಸಮಿತಿಗಳಿಗೆ ಸದಸ್ಯರ ಪಟ್ಟಿಯನ್ನು ಫೆಬ್ರುವರಿ 15ರೊಳಗೆ ಸಲ್ಲಿಸುವಂತೆ ಮೇಯರ್ ಪದ್ಮಾವತಿ ಸೂಚಿಸಿದರು. ಇದುವರೆಗೆ 26 ವಾರ್ಡ್‌ಗಳ ಸದಸ್ಯರು ಮಾತ್ರ ಪಟ್ಟಿಯನ್ನು ಸಲ್ಲಿಸಿದ್ದಾರೆ. ಉಳಿದವರು ಆದಷ್ಟು ಬೇಗ ವಿವರ ಕೊಡಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.