ADVERTISEMENT

ಶಾಸಕರಿಗೆ ಕೊನೆಗೂ ತವರು ಸೇರುವ ಭಾಗ್ಯ!

​ಪ್ರಜಾವಾಣಿ ವಾರ್ತೆ
Published 25 ಮೇ 2018, 20:17 IST
Last Updated 25 ಮೇ 2018, 20:17 IST

ಬೆಂಗಳೂರು: ವಿಧಾನಸಭಾ ಚುನಾವಣಾ ಫಲಿತಾಂಶ ಬಂದು 10 ದಿನಗಳ ಬಳಿಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಕೊನೆಗೂ ತವರಿಗೆ ಮರಳುವ ಭಾಗ್ಯ ಒದಗಿಬಂತು. ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರು ಶುಕ್ರವಾರ ಸ್ವಕ್ಷೇತ್ರಗಳಿಗೆ ತೆರಳಿದರು.

ಸಮ್ಮಿಶ್ರ ಸರ್ಕಾರ ರಚಿಸುವ ನಿರ್ಧಾರ ಕೈಗೊಂಡ ತಕ್ಷಣವೇ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಎಲ್ಲ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದವು. ಜೆಡಿಎಸ್‌ ಶಾಸಕರು ನಗರದ ಹೋಟೆಲ್‌ ಶಾಂಗ್ರಿಲಾದಲ್ಲಿ ಉಳಿದುಕೊಂಡಿದ್ದರು. ಕಾಂಗ್ರೆಸ್‌ ಶಾಸಕರ ವಾಸ್ತವ್ಯಕ್ಕೆ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯಪಾಲ ವಜುಭಾಯಿ ವಾಲಾ ಅವರು ಸರ್ಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿದ ಬಳಿಕ ಶಾಸಕರನ್ನು ಮತ್ತೆ ಸ್ಥಳಾಂತರ ಮಾಡಿದ ಪಕ್ಷಗಳ ವರಿಷ್ಠರು ಹೈದರಾಬಾದ್‌ನ ರೆಸಾರ್ಟ್‌ ಒಂದಕ್ಕೆ ಕರೆದೊಯ್ದಿದ್ದರು.

ಬಿ.ಎಸ್‌.ಯಡಿಯೂರಪ್ಪ ಕಳೆದ ಶನಿವಾರ ಸದನದಲ್ಲಿ ವಿಶ್ವಾಸಮತ ಯಾಚಿಸದೆಯೇ ರಾಜೀನಾಮೆ ನೀಡಿದ ಬಳಿಕವೂ ಪಕ್ಷವು ಶಾಸಕರು ಸ್ವಕ್ಷೇತ್ರಗಳಿಗೆ ಮರಳುವುದಕ್ಕೆ ಪಕ್ಷದ ವರಿಷ್ಠರು ಅವಕಾಶ ನೀಡಿರಲಿಲ್ಲ.

ADVERTISEMENT

ಕಾಂಗ್ರೆಸ್‌ ಶಾಸಕರ ವಾಸ್ತವ್ಯಕ್ಕೆ ನಗರದ ‘ಹಿಲ್ಟನ್‌ ಬ್ಯಾಂಗಳೂರ್‌ ಎಂಬಸಿ ಗಾಲ್ಫ್‌ಲಿಂಕ್ಸ್‌’ ರೆಸಾರ್ಟ್‌ನಲ್ಲಿ ಪಕ್ಷದ ವರಿಷ್ಠರು ವ್ಯವಸ್ಥೆ ಮಾಡಿದ್ದರು. ಕುಟುಂಬದವರು ಜೊತೆಯಲ್ಲೇ ಉಳಿದುಕೊಳ್ಳುವುದಕ್ಕೂ ಅವಕಾಶ ಕಲ್ಪಿಸಿದ್ದರು.

ಜೆಡಿಎಸ್‌ ಶಾಸಕರೆಲ್ಲ ನಗರದ ಲಿ–ಮೆರಿಡಿಯನ್‌ ಹೋಟೆಲ್‌ನಲ್ಲಿ ಸೇರಿದ್ದರು. ಬಳಿಕ ಅವರನ್ನು ನಂದಿ ಬೆಟ್ಟ ಸಮೀಪದ ಪ್ರೆಸ್ಟೀಜ್‌ ಗಾಲ್ಫ್‌ಶೈರ್‌ ರೆಸಾರ್ಟ್‌ಗೆ ಕಳುಹಿಸಿಕೊಡಲಾಗಿತ್ತು.

ಎಚ್‌.ಡಿ.ಕುಮಾರಸ್ವಾಮಿ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲೂ ವಿಧಾನಸೌಧದದ ಆವರಣಕ್ಕೆ ಬಸ್‌ನಲ್ಲಿ ಬಂದಿದ್ದ ಶಾಸಕರು ಅದರಲ್ಲೇ ಹೋಟೆಲ್‌ಗೆ ಮರಳಿದ್ದರು.

ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತುಪಡಿಸುವ ಸಂದರ್ಭದಲ್ಲಿ ಸದನಕ್ಕೆ ಹಾಜರಾಗಲು ಉಭಯ ಪಕ್ಷಗಳ ಶಾಸಕರು ಹೋಟೆಲ್‌ನಿಂದ ವಿಧಾನಸೌಧಕ್ಕೆ ಬಸ್‌ನಲ್ಲೇ ಬಂದರು.

‘ನನ್ನನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಹೇಳಲು ಮನಸ್ಸು ತುಡಿಯುತ್ತಿತ್ತು. ಕೊನೆಗೂ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ’ ಎಂದು ಬೆಳಗಾವಿ ಜಿಲ್ಲೆಯ ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಕುಟುಂಬವು ಬೆಂಗಳೂರಿನಲ್ಲೇ ನೆಲೆಸಿದೆ. ಚುನಾವಣಾ ಪ್ರಚಾರಾರ್ಥ ಆರು ತಿಂಗಳು ಕ್ಷೇತ್ರದಲ್ಲಿ ಸತತ ಓಡಾಟ ನಡೆಸಿದ್ದೆ. ಆಗ ಕುಟುಂಬಸ್ಥರನ್ನು ಬಿಟ್ಟು ಇದ್ದು ಅಭ್ಯಾಸವಾಗಿತ್ತು. ಹಾಗಾಗಿ ಮನೆಯಿಂದ ದೂರ ಇದ್ದರೂ ಹೆಚ್ಚೇನೂ ಸಮಸ್ಯೆ ಆಗಿಲ್ಲ. ಕ್ಷೇತ್ರದ ಜನರೂ ಸಮ್ಮಿಶ್ರ ಸರ್ಕಾರ ರಚನೆ ಆದ ಬಳಿಕವೇ ಊರಿಗೆ ಬನ್ನಿ ಎಂದು ಸ್ಥೈರ್ಯ ತುಂಬಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.