ADVERTISEMENT

ಶಾಸಕರ ಭವನದ ಎದುರು ಮರ ಕಡಿತ ಸಲ್ಲದು: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಬೆಂಗಳೂರು: ಶಾಸಕರ ಭವನದ ಎದುರು ಬಹುಮಹಡಿ ಕಾರು ಪಾರ್ಕಿಂಗ್ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವಾಗ ಕಬ್ಬನ್ ಉದ್ಯಾನ ವ್ಯಾಪ್ತಿಯ ಯಾವುದೇ ಮರಗಳನ್ನು ಕಡಿಯದಂತೆ ಹೈಕೋರ್ಟ್, ಬಿಬಿಎಂಪಿಗೆ ಮಂಗಳವಾರ ಆದೇಶಿಸಿದೆ.

ಪಾರ್ಕಿಂಗ್ ನಿರ್ಮಾಣಕ್ಕೆ ತಡೆ ಕೋರಿ ರಮೇಶ್ ಬಾಬು ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಇಲ್ಲಿ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಮರಗಳನ್ನು ಕಡಿಯಲಾಗುತ್ತಿದೆ ಎನ್ನುವುದು ಅರ್ಜಿದಾರರು ಆರೋಪ.

ADVERTISEMENT

`ಇಲ್ಲಿ ಪಾರ್ಕಿಂಗ್‌ಗೆ ಅನುಮತಿ ಕೋರಿ ಈ ಹಿಂದೆ ಸರ್ಕಾರ ಅರ್ಜಿ ಸಲ್ಲಿಸಿತ್ತು. ಆಗ ಹೈಕೋರ್ಟ್, `ಹಣ ಮುಖ್ಯವಲ್ಲ. ಬದಲಿಗೆ ಉದ್ಯಾನ ಉಳಿಸುವುದು ಮುಖ್ಯ. ಹಣ ಸ್ವಲ್ಪ ಹೆಚ್ಚು ಖರ್ಚಾದರೂ ಪರವಾಗಿಲ್ಲ. ಉದ್ಯಾನದಲ್ಲಿನ ಮರಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು~ ಎಂದು ನಿರ್ದೇಶಿಸಿತ್ತು. ಇದರ ಹೊರತಾಗಿಯೂ ಈಗ ಆದೇಶ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಬಿಬಿಎಂಪಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ನ್ಯಾಯಮೂರ್ತಿಗಳು ನೋಟಿಸ್ ಜಾರಿಗೆ ಆದೇಶಿಸಿದ್ದಾರೆ.

ನಕಲಿ ವೈದ್ಯರು: ಮಾಹಿತಿಗೆ ಆದೇಶ

ಯುನಾನಿ, ಹೋಮಿಯೋಪಥಿ ಹೆಸರಿನಲ್ಲಿ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

`ಕರ್ನಾಟಕ ನೆಟ್‌ವರ್ಕ್ ಪೀಪಲ್ ವಿತ್ ಎಚ್‌ಐವಿ ಏಡ್ಸ್ ಸಂಘ~ ಈ ಅರ್ಜಿ ಸಲ್ಲಿಸಿದೆ. ಪರವಾನಗಿ ಪಡೆದುಕೊಳ್ಳದೇ, ಅಕ್ರಮವಾಗಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದ ರೋಗಿಗಳ ಪ್ರಾಣಕ್ಕೆ ಅಪಾಯವಿದೆ ಎನ್ನುವುದು ಅರ್ಜಿದಾರರ ದೂರು.
ಈ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಆದೇಶಿಸಿದೆ.

ರಸ್ತೆ ಮುಕ್ತಗೊಳಿಸಲು ಆದೇಶ

ದೊಮ್ಮಲೂರು ಬಳಿಯಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಜಮೀನಿನಲ್ಲಿ ಹಾದು ಹೋಗುವುದಕ್ಕೆ ಇರುವ ಎಂಇಎಸ್ ದ್ವಾರವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

`ಸಮೀಪದಲ್ಲಿ ಇರುವ ದೇವಾಲಯದ ಗಡಿಭಾಗದಲ್ಲಿನ ಗೋಡೆಯನ್ನು ಎರಡು ವಾರಗಳಲ್ಲಿ ತೆರವುಗೊಳಿಸಿ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಬೇಕು~ ಎಂದು ಪಾಲಿಕೆಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ತಿಳಿಸಿದೆ. ಈ ರಸ್ತೆಮುಚ್ಚಿರುವ ಕಾರಣ ತೊಂದರೆ ಆಗುತ್ತಿದೆ ಎಂದು ದೂರಿ ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

ಶಾಸಕ ಶ್ರೀನಿವಾಸ್‌ಗೆ ನೋಟಿಸ್

ರಾಜರಾಜೇಶ್ವರಿನಗರ ವ್ಯಾಪ್ತಿಯ ಪಂತರಪಾಳ್ಯ ಕೆರೆಯ ಏರಿ ಮೇಲೆ ಆಶ್ರಯ ಮನೆ ನಿರ್ಮಾಣವಾಗುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಅಲ್ಲಿಯ ಶಾಸಕ ಎಂ.ಶ್ರೀನಿವಾಸ್ ಸೇರಿದಂತೆ ಇತರ ಪ್ರತಿವಾದಿಗಳಿಗೆ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ಎನ್.ಎಚ್.ನಾಗೇಂದ್ರ ಹಾಗೂ ಇತರರು ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾಗಿರುವ ಸರ್ಕಾರ ಹಾಗೂ ಬಿಬಿಎಂಪಿಗೂ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.
ಕೆರೆಯ ಜಾಗದಲ್ಲಿ ಮನೆ ನಿರ್ಮಾಣ ಮಾಡಬಾರದು ಎನ್ನುವುದು ಕಾನೂನು. ಆದರೆ ಇಲ್ಲಿ ಹಿಂದುಳಿದ ವರ್ಗಗಳಿಗೆ ಆಶ್ರಯ ಮನೆ ನಿರ್ಮಿಸಲಾಗುತ್ತಿದ್ದು, ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎನ್ನುವುದು ಅರ್ಜಿದಾರರ ದೂರು. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.