ADVERTISEMENT

ಶಾಸಕ ಸುರೇಶ್‌ ಕುಮಾರ್‌ ವಿರುದ್ಧ ಎಸಿಬಿಗೆ ದೂರು

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:40 IST
Last Updated 5 ಮೇ 2018, 19:40 IST
ಶಾಸಕ ಸುರೇಶ್‌ ಕುಮಾರ್‌ ವಿರುದ್ಧ ಎಸಿಬಿಗೆ ದೂರು
ಶಾಸಕ ಸುರೇಶ್‌ ಕುಮಾರ್‌ ವಿರುದ್ಧ ಎಸಿಬಿಗೆ ದೂರು   

ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಮೇಲೆ ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ವಿರುದ್ಧ ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ’ಯಡಿ (ಪಿಸಿಎ) ಪ್ರಕರಣ ದಾಖಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.

ಕಾಂಗ್ರೆಸ್‌ ಪಕ್ಷದ ಕಾನೂನು ಘಟಕದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಈ ಸಂಬಂಧ ದೂರು ನೀಡಿದ್ದಾರೆ.

ಶಾಸಕರು, ಬಸವೇಶ್ವರ ನಗರದ ಶಾರದಾ ಕಾಲೋನಿಯಲ್ಲಿ ₹ 1.46 ಕೋಟಿ ಪಾವತಿಸಿ ಮನೆ ಖರೀದಿಸಿದ್ದಾರೆ. ನೋಂದಣಿ ಹಾಗೂ ಸ್ಟ್ಯಾಂಪ್‌ ಶುಲ್ಕವಾಗಿ ₹ 11.85 ಲಕ್ಷ ಪಾವತಿಸಿದ್ದಾರೆ. ಈ ಉದ್ದೇಶಕ್ಕಾಗಿ ನಾಗರಾಜ್‌ ಎಂಬುವರಿಂದ ₹ 15 ಲಕ್ಷ ಹಾಗೂ ನಾರಾಯಣ ಎಂಬುವರಿಂದ
₹ 6 ಲಕ್ಷ ಸಾಲ ಪಡೆದಿದ್ದಾಗಿ ಹೇಳಿದ್ದಾರೆ. ಇದಲ್ಲದೆ, ನೆಲಮಂಗಲದ ದಾಸನಪುರದಲ್ಲಿ 2009ರ ಡಿಸೆಂಬರ್‌ನಲ್ಲಿ ತಮ್ಮ ತಾಯಿ ಸುಶೀಲಮ್ಮ ಮತ್ತು ಪುತ್ರಿ ಹೆಸರಿನಲ್ಲಿ ₹ 1.68 ಲಕ್ಷಕ್ಕೆ ಖರೀದಿಸಿದ್ದ ನಿವೇಶನವನ್ನು ₹ 22 ಲಕ್ಷ ಮಾರಿರುವುದಾಗಿ ಅವರು ವಿವರಿಸಿದ್ದಾರೆ.

ADVERTISEMENT

ಇದು ಕೇವಲ 21 ತಿಂಗಳಲ್ಲಿ ಶೇ 654.76ರಷ್ಟು ಏರಿಕೆಯಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಸುರೇಶ್‌ ಕುಮಾರ್‌ ಸಲ್ಲಿಸಿರುವ ದಾಖಲೆಗಳು ಹಾಗೂ ಪ್ರಮಾಣ ಪತ್ರದ ಪ್ರಕಾರ, 2013ರ ಮಾರ್ಚ್‌ ಅಂತ್ಯಕ್ಕೆ ಅವರು ಹಾಗೂ ಅವರ ಕುಟುಂಬ
₹ 38.27 ಲಕ್ಷ ಸಾಲ ಮರುಪಾವತಿಸಿದ್ದು, ₹ 15.13ಲಕ್ಷ ಉಳಿತಾಯ ಮಾಡಿದೆ. ಆದರೆ, ಆ ವರ್ಷದ ಅವರ ಆದಾಯ ₹ 22.92 ಲಕ್ಷ ಎಂದು ಘೋಷಿಸಿದೆ. ಅಲ್ಲದೆ, ಬಸವೇಶ್ವರ ನಗರದ ಮನೆಗೆ ಕಡಿಮೆ ಮೌಲ್ಯ ತೋರಿಸಿ ನೋಂದಣಿ ಮಾಡಿಸಲಾಗಿದೆ.

ಆದಾಯ ತೆರಿಗೆ ಇಲಾಖೆಗೆ ಸರಿಯಾದ ಮಾಹಿತಿ ನೀಡದೆ, ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಸುರೇಶ್‌ ಕುಮಾರ್‌ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಸೂರ್ಯ ಮನವಿ ಮಾಡಿದ್ದಾರೆ.

* ಇದು 2011ಕ್ಕೆ ಸಂಬಂಧಿಸಿದ ವಿಷಯ. ಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಕೆದಕಲಾಗಿದೆ. ನೋಟಿಸ್‌ ಬಂದರೆ ಸೂಕ್ತ ಉತ್ತರ ಕೊಡುತ್ತೇನೆ

–ಎಸ್‌. ಸುರೇಶ್‌ ಕುಮಾರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.